ದಾವಣಗೆರೆ | ಆನ್ ಲೈನ್ ಗೇಮ್ ನಲ್ಲಿ ವಂಚನೆ: ಯುವಕ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ದಾವಣಗೆರೆ: ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂ. ಕಳೆದುಕೊಂಡ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ನಗರದಲ್ಲಿ ನಡೆದಿದೆ.
ಇಲ್ಲಿನ ಸರಸ್ವತಿ ನಗರದ ನಿವಾಸಿ ಶಶಿಕುಮಾರ್(25) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಆನ್ ಲೈನ್ ಗೇಮ್ನಲ್ಲಿ ಹಣ ಹೂಡಿಕೆ ಮಾಡಿದ್ದ. ನಂತರ ಸಾಲ ಮಾಡಿಕೊಂಡು ಅದರಲ್ಲಿ ಸಿಲುಕಿ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆನ್ಲೈನ್ ಗೇಮ್ ನಲ್ಲಿ ಸುಮಾರು 18 ಲಕ್ಷ ರೂ. ಕಳೆದುಕೊಂಡು ಮಾನಸಿಕ ತೊಳಲಾಟಕ್ಕೆ ಸಿಲುಕಿದ್ದ ಎಂದು ಹೇಳಲಾಗಿದೆ.
ಶಶಿಕುಮಾರ್ ಸುಮಾರು 19,25,21,722 ರೂ. ಆನ್ಲೈನ್ ಗೇಮ್ನಲ್ಲಿ ಬಂದಿರುವುದಾಗಿ ಆ್ಯಪ್ ನಲ್ಲಿ ತೋರಿಸುತ್ತಿತ್ತೆನ್ನಲಾಗಿದೆ. ಆದರೆ ವೆಬ್ಸೈಟ್ ಅನ್ನು ಸಂಪರ್ಕಿಸಿದರೆ ಕೇಳಿದರೆ ನೀಡಿಲ್ಲ ಎಂದು ಬೇಸರಿಸಿಕೊಂಡಿದ್ದಾರೆ.
ಲಕ್ಷಾಂತರ ರೂ. ಹೂಡಿಕೆ ಮಾಡಿದ್ದೆ. ಆದರೆ ಸೋತಾಗ ಹಣ ಪಡೆದು ನಾನು ಗೆದ್ದಾಗ ನೀಡಿಲ್ಲ ಎಂದು ಶಶಿಕುಮಾರ್ ಡೆತ್ ನೋಟ್ನಲ್ಲಿ ಬರೆದಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ಶಶಿಕುಮಾರ್ ಆತ್ಮಹತ್ಯೆಗೂ ಮುನ್ನ ಆರು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ. ಸಿಎಂ, ಡಿಸಿಎಂ ಅಲ್ಲದೇ ಮುಖ್ಯ ನ್ಯಾಯಾಧೀಶರಿಗೂ ಎರಡು ಪುಟಗಳ ಮನವಿ ಪತ್ರ ಬರೆದಿದ್ದಾನೆ. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬಗ್ಗೆಯೂ ಡೆತ್ ನೋಟ್ನಲ್ಲಿ ಬರೆದಿದ್ದು, ಆನ್ಲೈನ್ ಗೇಮ್ ನಂಥ ವೆಬ್ ಸೈಟ್ ವಿರುದ್ಧ ಧ್ವನಿ ಎತ್ತುವಂತೆ ಕೇಳಿಕೊಂಡಿದ್ದಾರೆ.
ಕೆಟಿಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.