ನಾನು ಪಕ್ಷ ವಿರೋಧಿಯಲ್ಲ, ಅನಾರೋಗ್ಯದ ಕಾರಣ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿಲ್ಲ: ಕಾಂಗ್ರೆಸ್ MLC ಅಬ್ದುಲ್ ಜಬ್ಬಾರ್ ಸ್ಪಷ್ಟನೆ

ದಾವಣಗೆರೆ: ಅನಾರೋಗ್ಯದ ಕಾರಣದಿಂದ ನಾನು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿಲ್ಲ ಹೊರತು ಪಕ್ಷಕ್ಕಾಗಿ ದುಡಿಯುವುದನ್ನು ನಿಲ್ಲಿಸಿಲ್ಲ. ನಾನು ಪಕ್ಷ ವಿರೋಧಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಸ್ಪಷ್ಟನೆ ನೀಡಿದ್ದಾರೆ.
ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿ ಅನಗತ್ಯ, ಗೊಂದಲದ ಹೇಳಿಕೆಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ತನಗೆ ಹುಷಾರಿಲ್ಲದ ಕಾರಣ ಸಿಎಂ ಸಿದ್ದರಾಮಯ್ಯ ಅವರು ಬಂದಾಗ ಬಂದಿರಲಿಲ್ಲ. ಜ್ವರ, ಕೆಮ್ಮು, ನೆಗಡಿ ಇತ್ತು. ಮೈಯಲ್ಲಿ ಹುಷಾರಿಲ್ಲದ ಕಾರಣ ಹೋಗಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನೇನೂ ಪಕ್ಷ ವಿರೋಧಿ ಅಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದು ತಿಳಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರಾಗಲಿ ಅಥವಾ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಾಗಲಿ ಇದುವರೆಗೂ ನಮ್ಮನ್ನು ಪ್ರಚಾರಕ್ಕೆ ಸೌಜನ್ಯಕ್ಕಾದರೂ ಕರೆದಿಲ್ಲ. ಕರೆದಿಲ್ಲ ಎಂಬ ಕಾರಣಕ್ಕೆ ನಾವು ಪ್ರಚಾರದಲ್ಲಿ ಭಾಗವಹಿಸಿಲ್ಲ ಹೊರತು, ನಾವು ಯಾರ ವಿರುದ್ಧವೂ ಇಲ್ಲ. ನಾವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ. ಬದಲಾಗಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ನಮ್ಮ ಶಕ್ತಿ ಮೀರಿ ಪರೋಕ್ಷವಾಗಿ ಶ್ರಮಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ನಿನ್ನೆ ಡಿ.ಕೆ.ಶಿವಕುಮಾರ್ ಅವರು ಕರೆ ಮಾಡಿ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಎಂದು ಸೂಚಿಸಿದ ಕಾರಣದಿಂದ ಇಂದು ಗೋಷ್ಠಿ ನಡೆಸಿದ್ದೇನೆ ಎಂದು ಅಬುಲ್ ಜಬ್ಬಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸದಸ್ಯ ಸುಭಾಶ್ಚಂದ್ರ ಮತ್ತಿತರರು ಹಾಜರಿದ್ದರು.







