ಬಿ.ಕೆ. ಹರಿಪ್ರಸಾದ್ - ಸಿಎಂ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ದಾವಣಗೆರೆ: ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದಿಢೀರ್ ಭೇಟಿ ನೀಡಿ ಚರ್ಚೆ ನಡೆಸಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರವಿವಾರ ಖಾಸಗಿ ಕಾರ್ಯಕ್ರಮಕ್ಕೆ ದಾವಣಗೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಬಿ.ಕೆ.ಹರಿಪ್ರಸಾದ್ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಅದೇನು ದೊಡ್ಡ ವಿಷಯವಲ್ಲ. ನಮ್ಮ ಪಕ್ಷದ ಶಾಸಕರು, ಸಚಿವರು ಅವರ ಮನೆಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಯವರು ಭೇಟಿ ನೀಡಿದ್ದಾರೆ, ಅದು ಸ್ವಾಭಾವಿಕ. ಅದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಉತ್ತರಿಸಿದರು.
ಸಚಿವ ಸಂಪುಟ ಪುನರ್ ರಚನೆ ನಾವು ಮಾಡುವುದಲ್ಲ. ಮುಖ್ಯಮಂತ್ರಿಯವರು, ಅಧ್ಯಕ್ಷರು, ಹೈಕಮಾಂಡ್ ಮಾಡಬೇಕು. ಅದು ಅವರ ಮಟ್ಟದಲ್ಲಿ ನಡೆಯುವ ಪ್ರಕ್ರಿಯೆ, ನಮಗೆ ಸಂಬಂಧವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬಹುಭಾಷಾ ನಟ ಕಮಲ್ ಹಾಸನ್ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅವರು ಹೇಳಿರುವ ಹೇಳಿಕೆಗೆ ಅಷ್ಟೊಂದು ಮಹತ್ವ ಕೊಡುವುದರಲ್ಲಿ ಅರ್ಥವಿಲ್ಲ. ಅವರು ಹೇಳಿದಾಕ್ಷಣ ಕನ್ನಡ ಭಾಷೆಗೆ ಕುಂದು ಬರುವುದಿಲ್ಲ. ಕನ್ನಡ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ ಎಂದರು.
ಕಮಲ್ ಹಾಸನ್ ಹೇಳಿಕೆ ವಿರುದ್ಧ ಸುಮೋಟೋ ಪ್ರಕರಣ ಹಾಕುವ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ. ಈಗ ಈ ವಿಷಯದ ಬಗ್ಗೆ ಬಹಳ ಚರ್ಚೆ ಮಾಡುವುದು ಬೇಡ ಎಂದು ಪ್ರಶ್ನೆಗೆ ಉತ್ತರಿಸಿದರು.
ರಾಜ್ಯದಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ. ಎಲ್ಲೋ ಒಂದು ರೀತಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ರಾಜ್ಯದಲ್ಲಿ ಇಲ್ಲ, ಕೇವಲ ಮಂಗಳೂರಿನಲ್ಲಿ ಮಾತ್ರ ನಡೆದಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ತೆಗೆದುಕೊಂಡಿದೆ. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹಾಳಾಗುವುದಕ್ಕೆ ಬಿಡುವುದಿಲ್ಲ" ಎಂದರು.
ಜಾತಿ ಗಣತಿ ಅನುಷ್ಠಾನ ಕುರಿತು ಮೌನಕ್ಕೆ ಶರಣಾಗಿಲ್ಲ. ಈಗಾಗಲೇ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಾತಿ ಗಣತಿ ಅನುಷ್ಠಾನ ಕುರಿತು ಸರಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.