ಲೇಖನಿಗಳು ಅನಿಷ್ಟಗಳ ವಿರುದ್ಧ ಕ್ರಾಂತಿಯ ಶಕ್ತಿಯಾಗಲಿ : ಸಾಹಿತಿಗಳಿಗೆ ನಾಗಲಕ್ಷ್ಮೀ ಚೌಧರಿ ಕರೆ

ದಾವಣಗೆರೆ : ಮಹಿಳೆ ಅಂತರ್ಗತವಾಗಿ ಹುಟ್ಟಿನಿಂದಲೇ ನಾಯಕಿ. ಅವಳಿಗೆ ಅವಕಾಶವೊಂದು ಸಿಗಬೇಕಷ್ಟೇ. ಅವಕಾಶ ಸಿಕ್ಕರೆ ಇಡೀ ಜಗತ್ತನ್ನೇ ಆಳಬಲ್ಲಳು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.
ನಗರದ ಕುವೆಂಪು ಕನ್ನಡದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗಂಡಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿರುವಂತೆ ಪ್ರತಿ ಹೆಣ್ಣಿನ ಯಶಸ್ಸಿನ ಹಿಂದೆ ಗಂಡಿನ ಸಹಕಾರವೂ ಬೇಕು. ಕೇವಲ ಹೆಣ್ಣುಮಕ್ಕಳಷ್ಟೇ ಅಲ್ಲ, ಇಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬ ತಂದೆ, ಅಣ್ಣ-ತಮ್ಮಂದಿರು ನಮ್ಮೊಂದಿಗೆ ನಿಲ್ಲಬೇಕು. ಹೆಣ್ಣು ಮತ್ತು ಗಂಡು ಒಟ್ಟಾಗಿ ಸಾಗಿದಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಇಂದಿಗೂ ಬಾಲ್ಯ ವಿವಾಹಗಳು ಮತ್ತು ಪೊಕ್ಸೊ ಪ್ರಕರಣಗಳು ನಡೆಯುತ್ತಿರುವುದು ನೋವಿನ ಸಂಗತಿ. 18 ವರ್ಷ ತುಂಬುವುದರೊಳಗೆ ಪ್ರೀತಿಯ ಹೆಸರಿನಲ್ಲಿ ಹೆಣ್ಣುಮಕ್ಕಳು ಮೋಸ ಹೋಗುತ್ತಿದ್ದಾರೆ. ಇನ್ನೂ ಹುಟ್ಟದ ಕಂದಮ್ಮಗಳನ್ನು, ತಾಯಿಯ ಹೊಟ್ಟೆಯಲ್ಲೇ ಭ್ರೂಣ ಹತ್ಯೆ ಮಾಡುವ ಕ್ರೂರ ಪದ್ಧತಿ ಕೊನೆಯಾಗಬೇಕು. ಮಹಿಳಾ ಲೇಖಕಿಯರ ಲೇಖನಿಗಳು ಈ ಅನಿಷ್ಟಗಳ ವಿರುದ್ಧ ಕ್ರಾಂತಿಯ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಸಾಹಿತಿಗಳಿಗೆ ನಾಗಲಕ್ಷ್ಮೀ ಚೌಧರಿ ಕರೆ ನೀಡಿದರು.
ಸಮ್ಮೇಳನದ ಸರ್ವಾಧ್ಯಕ್ಷೆ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಮಹಿಳೆಯರನ್ನು ಗೌರವಿಸಿ, ಪೂಜ್ಯಭಾವದಿಂದ ಕಾಣುವ ಮನೆಯಲ್ಲಿ ಅಥವಾ ಸಮಾಜದಲ್ಲಿ ದೇವತೆಗಳು ಸಂತೋಷದಿಂದ ನೆಲೆಸಿರುತ್ತಾರೆ. ಮಹಿಳೆಯರಿಗೆ ಗೌರವವಿಲ್ಲದ ಸ್ಥಳದಲ್ಲಿ ಮಾಡುವ ಎಲ್ಲಾ ಕಾರ್ಯಗಳು ಫಲಪ್ರದವಾಗುವುದಿಲ್ಲ. ಆದ್ದರಿಂದ ಮಹಿಳೆಯರ ಗೌರವವೇ ಕುಟುಂಬದ, ಸಮಾಜದ ಮತ್ತು ರಾಷ್ಟ್ರದ ಏಳಿಗೆಯ ಮೂಲಾಧಾರವಾಗಿದೆ ಎಂದು ನುಡಿದರು.
ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಯೋಜಿಸಿರುವ ಪ್ರಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದು ನನ್ನ ವೈಯಕ್ತಿಕ ಗೌರವವಲ್ಲ. ಇದು ಅಧ್ಯಾತ್ಮಿಕ ಜೀವನಕ್ಕೆ, ಮಹಿಳಾ ಶಕ್ತಿಗೆ, ಮೌಲ್ಯಾಧಾರಿತ ಬದುಕಿಗೆ ಹಾಗೂ ಸಾಹಿತ್ಯ ಸೇವೆಗೆ ಸಂದ ಗೌರವವೆಂದರು.
ಯಾವ ಸಮಾಜದಲ್ಲಿ ಮಹಿಳೆಗೆ ಗೌರವವಿದೆಯೋ, ಆ ಸಮಾಜ ಸದಾ ಪ್ರಗತಿಯತ್ತ ಸಾಗುತ್ತದೆ. ಮಹಿಳೆಯನ್ನು ಕೇವಲ ರಕ್ಷಿಸಬೇಕಾದ ವ್ಯಕ್ತಿಯಾಗಿ ನೋಡುವುದಕ್ಕಿಂತ, ನಾಯಕತ್ವ ನೀಡುವ ಶಕ್ತಿಯಾಗಿ ನೋಡಬೇಕಾಗಿದೆ. ಇಂದು ಮಹಿಳೆ ವಿಜ್ಞಾನಿ, ನ್ಯಾಯಮೂರ್ತಿ, ಆಡಳಿತಾಧಿಕಾರಿ, ವೈದ್ಯೆ, ಶಿಕ್ಷಕಿ, ಲೇಖಕಿ, ಕವಯತ್ರಿ, ಉದ್ಯಮಿ, ರೈತ, ಕಲಾವಿದೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಇದೀಗ ಸಾಹಿತ್ಯದಲ್ಲಿಯೂ ಮಹಿಳೆಯ ಧ್ವನಿ ಇನ್ನಷ್ಟು ಪ್ರಬಲವಾಗಬೇಕೆಂದು ಬ್ರಹ್ಮಾಕುಮಾರಿ ಲೀಲಾಜಿ ಕರೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ದಿಕ್ಸೂಚಿ ನುಡಿಗಳನ್ನಾಡಿದರು. ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು. ಸಮ್ಮೇಳನ ಪ್ರಧಾನ ಸಂಚಾಲಕಿ ವೀಣಾ ಕೃಷ್ಣಮೂರ್ತಿ ಆಶಯ ನುಡಿಗಳನ್ನಾಡಿದರು. ಜಗಳೂರು ಶಾಸಕ ದೇವೇಂದ್ರಪ್ಪ ಅವರ ಪತ್ನಿ ತಿಪ್ಪಮ್ಮ ಅವರು ಹೆಳವನಕಟಟ್ಟೆ ಗಿರಿಯಮ್ಮ ಮಹಾದ್ವಾರ ಉದ್ಘಾಟಿಸಿದರು.
ವೇದಿಕೆಯಲ್ಲಿ ದಾವಣಗೆರೆ ವಿವಿ ಸಿಂಡಿಕೇಟ್ ಮಾಜಿ ಸದಸ್ಯೆ ನೀತಾ ಬಿ.ಇ., ವೀಣಾ ನಂಜಪ್ಪ, ಬಿ.ವಿ.ಪರಿಮಳಾ ಜಗದೀಶ್ ಕೂಲಂಬಿ, ಕಿರುವಾಡಿ ಗಿರಿಜಮ್ಮ, ಜಯಮ್ಮ ನೀಲಗುಂದ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಮಹಿಳೆಯರೇ ರಚಿಸಿರುವ ಕೃತಿಗಳನ್ನು ಗಣ್ಯರು ಲೋಕಾರ್ಪಣೆಗೊಳಿಸಿದರು.
ಸುಮತಿ ಜಯಪ್ಪ ಸ್ವಾಗತಿಸಿದರು. ಸೌಭಾಗ್ಯ ಹಿರೇಮಠ ಹಾಗೂ ಹೇಮಾ ಶೇಟ್ ನಿರೂಪಿಸಿದರು. ಇಂದಿರಾ ವಂದಿಸಿದರು. ಸುಗಮ ಸಂಗೀತಾ ತಂಡದವರು ನಾಡಗೀತೆ, ರೈತಗೀತೆ ಪ್ರಚುರ ಪಡಿಸಿದರು. ನೂಪುರ ಕಲಾ ಸಂಸ್ಥೆ ವಿದ್ಯಾರ್ಥಿಗಳ ಸ್ವಾಗತ ನೃತ್ಯ ಗಮನ ಸೆಳೆಯಿತು.






