ದಾವಣಗೆರೆ | ಭದ್ರಾ ಬಲದಂಡೆ ನೀರು ಪೂರೈಸುವ ಕಾಮಗಾರಿ ನಿಲ್ಲಿಸಲು ಆಗ್ರಹ : ರಾಷ್ಟ್ರೀಯ ಹೆದ್ದಾರಿ ತಡೆದು ಬಿಜೆಪಿ ಧರಣಿ

ದಾವಣಗೆರೆ : ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿ ಚಿತ್ರದುರ್ಗ, ಚಿಕ್ಕಮಗಳೂರು, ಅಜ್ಜಂಪುರ, ತರಿಕೆರೆಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಾಮಗಾರಿ ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಬುಧವಾರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ತಡೆದು ಧರಣಿ ನಡೆಸಿದ್ದಾರೆ.
ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಧರಣಿನಿರತರು, ಭದ್ರಾ ನೀರು ನಮ್ಮ ಹಕ್ಕು, ಭದ್ರಾ ಬಲದಂಡೆ ನಾಲೆ ಸೀಳಿ ಬೇರೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಅವೈಜ್ಞಾನಿಕ ಯೋಜನೆ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ನಗರದ ಹೊರವಲಯದ ಕ್ಯಾನ್ಸರ್ ಆಸ್ಪತ್ರೆ ಸಮೀಪ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಧರಣಿ ನಡೆಸಲು ಮುಂದಾದ ರೈತ ಮುಖಂಡರು, ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಭದ್ರಾ ನೀರನ್ನು ಬೇರೆ ಜಿಲ್ಲೆಗೆ ಕೊಂಡೊಯ್ಯಲು ಹೊರಟಿರುವ ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಭತ್ತ, ಅಡಿಕೆ ಬೆಳೆಗೆ ಭದ್ರಾ ಜಲಾಶಯದ ನೀರನ್ನೇ ಅವಲಂಬಿಸಿರುವ ಜಿಲ್ಲೆಯ ರೈತರಿದ್ದಾರೆ. ಮಳೆ ಕಡಿಮೆ ಪ್ರಮಾಣದಲ್ಲಿ ಬಿದ್ದಾಗ, ಮುಂಗಾರು ತಡವಾಗಿ ಆರಂಭವಾದಾಗ ನೀರಿಲ್ಲದೆ ಪರಿತಪಿಸಿದ ಉದಾಹರಣೆಗಳಿವೆ. ರಾಜ್ಯ ಸರಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ನಮ್ಮನ್ನು ಬಂಧಿಸಿದೆ. ಪ್ರಾಣವನ್ನು ಬೇಕಾದರೂ ಕೊಡುತ್ತೇವೆ. ಆದರೆ ಭದ್ರಾ ಬಲದಂಡೆ ನೀರನ್ನು ಮಾತ್ರ ಕೊಡುವುದಿಲ್ಲ ಎಂದು ಹೇಳಿದರು.
ಧರಣಿಯಲ್ಲಿ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ್, ಕೊಳೆನಹಳ್ಳಿ ಬಿ.ಎಂ. ಸತೀಶ್, ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಬಿ.ಜಿ. ಅಜಯಕುಮಾರ್, ಧನಂಜಯ ಕಡ್ಲೇಬಾಳು, ಬೆಳವನೂರು ನಾಗೇಶ್ವರರಾವ್, ಚಂದ್ರಶೇಖರ್ ಪೂಜಾರ್, ಆಲೂರು ನಿಂಗರಾಜ್, ಆರ್.ಎಲ್. ಶಿವಪ್ರಕಾಶ್, ಅನಿಲಕುಮಾರ ನಾಯ್ಕ, ಎಚ್.ಪಿ. ವಿಶ್ವಾಸ್, ಬಾತಿ ಶಿವಕುಮಾರ್, ಬಿ.ಎಂ. ಷಣ್ಮುಖಯ್ಯ, ನೂರಾರು ರೈತರು ಪಾಲ್ಗೊಂಡಿದ್ದರು.