ದಾವಣಗೆರೆ | ಸಂಯುಕ್ತ ಹೋರಾಟ ಕರ್ನಾಟಕದಿಂದ ಪ್ರತಿಭಟನೆ ; ದೇವನಹಳ್ಳಿಯಲ್ಲಿ ರೈತರ ಬಂಧನಕ್ಕೆ ಖಂಡನೆ

ದಾವಣಗೆರೆ : ದೇವನಹಳ್ಳಿ ಭೂ ಸ್ವಾದೀನ ವಿರೋಧಿ ಹೋರಾಟದಲ್ಲಿ ಭಾಗಿಯಾದ ರೈತರು, ನಾಯಕರನ್ನು, ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆ ಜಿಲ್ಲಾ ಸಮಿತಿ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಈ ವೇಳೆ ಕಾರ್ಮಿಕ ಮುಖಂಡ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗರೆ ಚಂದ್ರು ಮಾತನಾಡಿ, ತಮ್ಮ 1,770 ಎಕರೆ ಫಲವತ್ತಾದ ಭೂಮಿಯನ್ನು ರಾಜ್ಯ ಸರಕಾರವು ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವುದರ ವಿರುದ್ಧ ಈ ಭಾಗದ ರೈತರು ಹೋರಾಡುತ್ತಿದ್ದಾರೆ. ಈ ಭೂಮಿಯ ಮೇಲೆ ಅವಲಂಬಿತರಾಗಿ ಹೈನುಗಾರಿಕೆ ಹಾಗೂ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಸಮೃದ್ಧವಾಗಿರುವ ಈ ಭೂಮಿಯ ಮೇಲೆ ಈಗ ಭೂಗಳ್ಳರ ಕರಿನೆರಳು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಟಿಯುಸಿ, ಸಿಪಿಐ ಮುಖಂಡ ಆವರಗೆರೆ ಉಮೇಶ್ ಮಾತನಾಡಿ, ರೈತರ ಮನಸ್ಸನ್ನು ಒಲಿಸಲು ರಾಜ್ಯ ಸರಕಾರವು ಕೈಗಾರಿಕಾ ಅಭಿವೃದ್ಧಿ ಹೆಸರಿನಲ್ಲಿ ರೈತರೊಂದಿಗೆ ಮೂರು ಸುತ್ತಿನ ಸಭೆಯನ್ನು ನಡೆಸಿ ನಿನ್ನೆ ಅಂತಿಮವಾಗಿ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ರೈತರ ಜೀವನದೊಂದಿಗೆ ಚೆಲ್ಲಾಟವಾಡುವ ಈ ನಿರ್ಧಾರವು ಸಂಪೂರ್ಣವಾಗಿ ರೈತ ವಿರೋಧಿಯಾಗಿದೆ. ಹಾಗೂ ಸರಕಾರವು ಯಾರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಖಂಡ ಮಧು ತೊಗಲೇರಿ ಮಾತನಾಡಿ, ಒಂದು ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಕೇಂದ್ರ ಬಿಜೆಪಿ ಸರಕಾರವು ಜಾರಿಗೊಳಿಸಿದ್ದ ಭೂ ಸುಧಾರಣಾ ನೀತಿಯನ್ನು ಇಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ವಿರೋಧಿಸಿ ‘ರೈತರೊಂದಿಗೆ ನಾವಿದ್ದೇವೆ, ಈ ನೀತಿಯನ್ನು ಹಿಮ್ಮೆಟ್ಟಿಸುತ್ತೇವೆ’ ಎಂದು ಹೇಳಿ ಈಗ ಇದೇ ನೀತಿಯನ್ನು ತಾವು ಅಧಿಕಾರಕ್ಕೆ ಬಂದಮೇಲೆ ಜಾರಿಗೊಳಿಸುತ್ತಿರುವುದು ರೈತರ ಬೆನ್ನಿಗೆ ಚೂರಿ ಹಾಕಿದಂತಿದೆ ಎಂದು ಕಿಡಿಕಾರಿದರು.
ಜನಶಕ್ತಿ ಮುಖಂಡ ಸತೀಶ್ ಅರವಿಂದ್ ಮಾತನಾಡಿ, ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆಯುವಂತಿಲ್ಲ ಎನ್ನುವ ಕಾನೂನಿದ್ದರೂ ಒಂದು ಕಡೆ ದೌರ್ಜನ್ಯದಿಂದ, ಇನ್ನೊಂದು ಕಡೆ ಭೂಮಿಯ ಕಾನೂನುಗಳನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಿಸಿ ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯ ಸರಕಾರವು ರಾಜ್ಯದ ರೈತರಿಗೆ ಮಾಡಿರುವ ಮಹಾ ದ್ರೋಹವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೈತ ಮುಖಂಡ ಬುಳ್ಳಾಪುರದ ಹನುಮಂತಪ್ಪ ಮಾತನಾಡಿ, ರೈತರನ್ನು ಬೀದಿಗೆ ತಳ್ಳಲಿರುವ ಈ ಸ್ವಾಧೀನ ನಿರ್ಧಾರವು ರದ್ದಾಗಿ ರೈತರ ಭೂಮಿ ರೈತರಿಗೆ ಬರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ರೈತ, ಕಾರ್ಮಿಕ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಮುಖಂಡರಾದ ಮರುಳಸಿದ್ದಯ್ಯ, ಪವಿತ್ರ ಅರವಿಂದ್, ಶ್ರೀನಿವಾಸ್, ಆನಂದ್ ರಾಜು, ಸಂತೋಷ್ ನಾಯಕ್, ಆಪ್ ಮುಖಂಡ ಆದಿಲ್ ಖಾನ್, ರಾಮಾಂಜನೇಯ, ಹಲವು ಮುಖಂಡರು ಭಾಗವಹಿಸಿದ್ದರು.