ಚುನಾವಣೆಯಲ್ಲಿ ಹಣ ಪಡೆದು ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದ ರೇಣುಕಾಚಾರ್ಯ : ಶಾಸಕ ಶಿವಗಂಗಾ ಬಸವರಾಜು ಆರೋಪ

ದಾವಣಗೆರೆ : ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಹಣ ಪಡೆದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಅವರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಣುಕಾಚಾರ್ಯ ಅವರು ಹಣ ಪಡೆದ ವಿಚಾರದಲ್ಲಿ ದಾಖಲೆ ಸಮೇತ ಬಹಿರಂಗ ಪಡಿಸಲು ಸಿದ್ಧನಿದ್ದೇನೆ. ಯಾವಾಗ, ಯಾವ ಸ್ಥಳದಲ್ಲಿ ಹಣ ಪಡೆದರು ಎಂದು ನನಗೆ ಗೊತ್ತಿದೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಸೋಲು ಕಂಡ ನಂತರ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದರು. ಅಷ್ಟೆ ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮನೆ ಬಾಗಿಲಿಗೂ ಬಂದಿದ್ದರು. ನಂತರ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಅವರ ನಿರ್ಧಾರ ಬದಲಿಸಿದರು ಎಂದರು.
ನಾನು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಆರೋಪಿಸಿದ್ದಾರೆ. ನಾನು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ. ಈ ವಿಚಾರವಾಗಿ ದೇವರ ಮುಂದೆ ಪ್ರಮಾಣ ಮಾಡಲು ಸಿದ್ಧ. ಆರೋಪ ಮಾಡಿರುವ ಎಂ.ಪಿ.ರೇಣುಕಾಚಾರ್ಯ ಅವರು ಪ್ರಮಾಣ ಮಾಡಬೇಕು ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಸವಾಲು ಹಾಕಿದರು.
ನಾನು ಇಸ್ಟೀಟ್ ದಂಧೆ ನಡೆಸುತ್ತಿದ್ದೇನೆ, ಐಪಿಎಲ್ ಬೆಟ್ಟಿಂಗ್‌ನಲ್ಲಿ ಭಾಗಿ ಆಗಿದ್ದೇನೆ ಎಂಬ ಆರೋಪವನ್ನು ಎಂ.ಪಿ.ರೇಣುಕಾಚಾರ್ಯ ಅವರು ಮಾಡಿದ್ದಾರೆ. ಈ ಮೂರು ಆರೋಪಗಳು ಸುಳ್ಳು. ಇದಕ್ಕೆ ಸಿಗಂಧೂರು ಚೌಡೇಶ್ವರಿ, ಕಟೀಲು ಪರಮೇಶ್ವರಿ ಹಾಗೂ ಚನ್ನಗಿರಿ ತಾಲೂಕಿನ ಮಾವಿನಹಳ್ಳಿ ಮಹಾರುದ್ರಸ್ವಾಮಿ ದೇಗುಲಕ್ಕೆ ಬರಲು ಸಿದ್ಧನಿದ್ದೇನೆ. ಅವರು ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ರಾಜಕೀಯ ಟೀಕೆ ಮಾಡಲಿ ಅದಕ್ಕೆ ನಾನೇನು ಉತ್ತರ ಕೊಡುವುದಿಲ್ಲ. ಆದರೆ, ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಎಂ.ಪಿ.ರೇಣುಕಾಚರ್ಯ ಅವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಇದರಿಂದ ನನ್ನ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಹೀಗಾಗಿ, ಅವರ ಆರೋಪಗಳಿಗೆ ಉತ್ತರಿಸುತ್ತಿದ್ದೇನೆ. ಅವರು ಸುಳ್ಳನ್ನು ಸತ್ಯ ಮಾಡಲು ಹೋರಟಿದ್ದಾರೆ ಎಂದು ಟೀಕಿಸಿದರು.
ನಾನು, ಲಾಟರಿ ಮೂಲಕ ಶಾಸಕನಾಗಿದ್ದೇನೆ ಎಂದು ಹೇಳಿದ್ದಾರೆ. ನನ್ನನ್ನು ಜನರು ಆಯ್ಕೆ ಮಾಡಿರುವುದು ಕೆಲಸ ನೋಡಿ ವಿನಹಃ, ಅವರಂತೆ ಬಿಎಸ್‌ವೈ ಆಲೆಯಿಂದ ಗೆಲುವು ಸಾಧಿಸಿಲ್ಲ. ಡೋಂಗಿ ರಾಜಕಾರಣ ಮಾಡಿಲ್ಲ. ರಾಜಕೀಯ ಇತಿಹಾಸದಲ್ಲಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ರೆಸಾರ್ಟ್ ರಾಜಕಾರಣ ಮಾಡಿದವರು ಯಾರು ಎಂದು ಜನತೆಗೆ ತಿಳಿದಿದೆ ಎಂದು ಶಾಸಕ ಶಿವಗಂಗಾ ಬಸವರಾಜು ದೂರಿದರು.