ಧರ್ಮಸ್ಥಳ ಸರಣಿ ಹತ್ಯೆ ಆರೋಪ | ನಿಷ್ಪಕ್ಷ ತನಿಖೆ ನಡೆಸಲು ಕರ್ನಾಟಕ ಜನಶಕ್ತಿ ಒತ್ತಾಯ

ದಾವಣಗೆರೆ : ಸೌಜನ್ಯಾಳಂತಹ ಅಮಾಯಕರ ಕೊಲೆಗಳು ಕೊನೆಯಾಗಬೇಕು. ಮುಚ್ಚಿ ಹಾಕಿರುವ ಅಪಹರಣ, ಅತ್ಯಾಚಾರ, ದೌರ್ಜನ್ಯ, ಕೊಲೆ ಮತ್ತು ಬೆದರಿಕೆಗಳ ತನಿಖೆ ನಡೆಸಿ ನೈಜ ಅಪರಾಧಿಗಳನ್ನು ಕಾನೂನಿನ ಮುಂದೆ ತರಬೇಕು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ದೌರ್ಜನ್ಯ ಪ್ರಕರಣಗಳ ತನಿಖೆಗೆ ನೇಮಕವಾಗಿರುವ ವಿಶೇಷ ತನಿಖಾ ದಳ ನಿಷ್ಪಕ್ಷ ತನಿಖೆ ನಡೆಸುವಂತೆ ಒತ್ತಾಯಿಸಿ ದಾವಣಗೆರೆ ಕರ್ನಾಟಕ ಜನಶಕ್ತಿ ಜಿಲ್ಲಾ ಸಮಿತಿಯ ಮುಖಂಡರು ದಾವಣಗೆರೆ ಉಪವಿಭಾಗಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಧರ್ಮಸ್ಥಳದಲ್ಲಿ ನಡೆದಿರುವ ಸೌಜನ್ಯಾ ಪ್ರಕರಣ ಮತ್ತು ಇತ್ತೀಚೆಗೆ ಸಾಕ್ಷಿಯಾಗಲು ಮುಂದೆ ಬಂದಿರುವ ದೂರುದಾರ ಹೇಳಿರುವಂತೆ ನಡೆದಿದೆ ಎನ್ನಲಾದ ಅಸಂಖ್ಯಾತ ಹೆಣ್ಣುಮಕ್ಕಳ ಅತ್ಯಾಚಾರ ಕೊಲೆ ಮತ್ತು ದೌರ್ಜನ್ಯ ಪ್ರಕರಣಗಳು ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಕಲಕುವಂಥದ್ದಾಗಿವೆ. ಈ ಪ್ರಕರಣಗಳು ಕೇವಲ ಒಂದೆರಡು ಘಟನೆಗಳಲ್ಲ. ಇವು ಧಾರ್ಮಿಕ ಸಂಸ್ಥೆಗಳ ಪಾರದರ್ಶಕತೆ, ಸರಕಾರದ ಜವಾಬ್ದಾರಿ ಮತ್ತು ನಮ್ಮ ಸಮಾಜದ ನೈತಿಕತೆಯನ್ನು ಪ್ರಶ್ನಿಸುತ್ತಿರುವ ಆಕ್ರೋಶದ ಧ್ವನಿಗಳಾಗಿವೆ ಎಂದು ಹೇಳಿದರು.
2012ರಲ್ಲಿ ಧರ್ಮಸ್ಥಳದಲ್ಲಿ 16 ವರ್ಷದ ಶಾಲಾ ಬಾಲಕಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಈ ದುರಂತವು ಕೇವಲ ಒಬ್ಬ ಬಾಲಕಿಯ ಕುಟುಂಬಕ್ಕೆ ಸೀಮಿತವಾಗಿರಲಿಲ್ಲ. ಆದರೆ, ಎಷ್ಟೆಲ್ಲ ಹೋರಾಟ, ಬಡಿದಾಟಗಳ ಹೊರತಾಗಿಯೂ ಈ ಪ್ರಕರಣದ ತನಿಖೆಯು ಸಮರ್ಪಕವಾಗಿ ನಡೆಯದಿರುವುದು, ಸತ್ಯವನ್ನು ಮುಚ್ಚಿ ಹಾಕುವ ಯತ್ನಗಳು ಮತ್ತು ಆರೋಪಿಗಳಿಗೆ ಸೂಕ್ತ ಶಿಕ್ಷೆಯಾಗದಿರುವುದು, ನಾಡಿನ ಎಚ್ಚೆತ್ತ ನಾಗರಿಕರಿಗೆ ಅಪಾರವಾದ ಆತಂಕ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೂರುದಾರನ ದೂರು ಮತ್ತು ಮಹಿಳಾ ಆಯೋಗದ ಪತ್ರವನ್ನು ಆಧಾರವಾಗಿಟ್ಟುಕೊಂಡು ಸರಕಾರ ಈಗ ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆ ಮಾಡಿದೆ. ಕರ್ನಾಟಕ ಸರಕಾರವು ಎಸ್‌ಐಟಿ ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ತನಿಖಾ ದಳದಿಂದ ಸಮರ್ಪಕ ತನಿಖೆಯಾಗುತ್ತದೆ ಎಂಬ ಬಗ್ಗೆ ಭರವಸೆ ಇಟ್ಟುಕೊಂಡಿದ್ದೇವೆ ಎಂದರು.
ಧರ್ಮಸ್ಥಳದಲ್ಲಿ ನಡೆದಿರುವ ಸರಣಿ ಹತ್ಯೆ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅಪರಾಧಿಗಳು ಎಷ್ಟೇ ಬಲಾಡ್ಯರಾಗಿದ್ದರೂ ನಿಷ್ಪಕ್ಷ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಸಾಕ್ಷ್ಯ ನೀಡಿರುವ ವ್ಯಕ್ತಿಗಳಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು. ತನಿಖೆಯ ಪ್ರಗತಿಯ ಬಗ್ಗೆ ಜನರಿಗೆ ಪಾರದರ್ಶಕ ಮಾಹಿತಿ, ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಮತ್ತು ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಸತೀಶ್ ಅರವಿಂದ್, ಜಿಲ್ಲಾ ಕಾರ್ಯದರ್ಶಿ ಪವಿತ್ರಾ, ಗೌರವಾಧ್ಯಕ್ಷ ಖಲೀಲ್, ಜಿಲ್ಲಾಧ್ಯಕ್ಷ ಆದಿಲ್ ಖಾನ್, ರಾಮಾಂಜನೇಯ, ಇತರಿದ್ದರು.







