ತಡಿಯಾಂಡಮೋಳ್ ಬೆಟ್ಟದಲ್ಲಿ ನಾಪತ್ತೆಯಾಗಿರುವ ಶರಣ್ಯಾ ಪತ್ತೆಗೆ 4 ಹೆಚ್ಚುವರಿ ತಂಡ ನಿಯೋಜನೆ, ಡ್ರೋನ್ ಶೋಧ: ಈಶ್ವರ ಖಂಡ್ರೆ

ದಾವಣಗೆರೆ, ಎ.4: ಕೊಡಗಿನ ತಡಿಯಾಂಡಮೋಳ್ ಗೆ ಚಾರಣಕ್ಕೆ ಬಂದಿದ್ದ ಕೇರಳದ ಯುವತಿ ಜಿ.ಎಸ್.ಶರಣ್ಯಾ (36) ಪತ್ತೆಗೆ ಮುಖ್ಯಮಂತ್ರಿ ಸೂಚಿಸಿದ್ದು, ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡಗಳನ್ನು ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ತಿಳಿಸಲಾಗಿದೆ. ಒಟ್ಟು 9 ತಂಡದಿಂದ ಕಾರ್ಯಾಚರಣೆ ನಡೆಯುತ್ತಿದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
ಚಾರಣಕ್ಕಾಗಿ ಕೇರಳದಿಂದ ಒಬ್ಬರೇ ಆಗಮಿಸಿ, ಕಕ್ಕಬ್ಬೆ ಗ್ರಾಮದಲ್ಲಿ ಖಾಸಗಿ ಹೋಂಸ್ಟೇಯಲ್ಲಿ ತಂಗಿದ್ದ ಶರಣ್ಯಾ ಗೈಡ್ ಹಾಗೂ ಇನ್ನಿತರ 15 ಚಾರಣಿಗರೊಂದಿಗೆ ಕಳೆದ ಗುರುವಾರ (ಎ.2) ಕೊಡಗಿನ ಎತ್ತರದ ಗಿರಿಶ್ರೇಣಿ ತಡಿಯಂಡಮೋಳ್ ಬೆಟ್ಟಕ್ಕೆ ತೆರಳಿದ್ದರು. ಅಂದು ಮಧ್ಯಾಹ್ನ ಅವರು ಕಾಣೆಯಾಗಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು, ನಕ್ಸಲ್ ನಿಗ್ರಹದಳ, ಶ್ವಾನದಳ ಮತ್ತು ಅರಣ್ಯ ಸಿಬ್ಬಂದಿ ಸೇರಿ 50 ಜನರ ಐದು ತಂಡಗಳು ಶೋಧ ನಡೆಸುತ್ತಿವೆ ಎಂದು ಸಚಿವರು ತಿಳಿಸಿದ್ದಾರೆ.
ಗುರುವಾರ ಕೊನೆಯದಾಗಿ ದೂರವಾಣಿ ಮೂಲಕ ಹೋಂಸ್ಟೇ ಸಂಪರ್ಕಿಸಿರುವ ಯುವತಿ, ತಾವು ದಾರಿತಪ್ಪಿದ್ದಾಗಿ ತಿಳಿಸಿದ್ದಾರೆ ಎಂಬ ಮಾಹಿತಿ ಇದೆ. ಅವರ ಫೊನ್ ಲೊಕೇಷನ್ ಆಧರಿಸಿ ಶೋಧ ನಡೆಸಲಾಗುತ್ತಿದೆ. ಸ್ಥಳೀಯ ಬುಡಕಟ್ಟು ಜನರೂ ನೆರವಿಗೆ ಧಾವಿಸಿದ್ದು, ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮರಾಗಳ ನೆರವು ಕೂಡಾ ಪಡೆಯಲಾಗಿದೆ, ಇಂದಿನಿಂದ ಹೆಚ್ಚುವರಿ ತಂಡ ನಿಯೋಜಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಯುವತಿ ಪತ್ತೆಗೆ ಮುಖ್ಯಮಂತ್ರಿ ಸೂಚನೆ:
ಚಾರಣಕ್ಕೆ ತೆರಳಿದ್ದ ಯುವತಿ ಕಾಣಯಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಸೂಚನೆ ನೀಡಿದ್ದಾರೆ. ಇಂದು ಇನ್ನೂ ಹೆಚ್ಚುವರಿಯಾಗಿ 40 ಅರಣ್ಯ ಸಿಬ್ಬಂದಿಯನ್ನು ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ. ಕಾಣೆಯಾಗಿರುವ ಯುವತಿಯ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ಮುಂದುವರಿದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.






