ದಾವಣಗೆರೆ ದಕ್ಷಿಣ ಕಾಂಗ್ರೆಸ್ ಟಿಕೆಟ್ ವಿಚಾರ | ಅಸಮಾಧಾನ ಬಗೆಹರಿಸಲಾಗುವುದು : ಸಿದ್ದರಾಮಯ್ಯ

ಸಿದ್ದರಾಮಯ್ಯ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ, ಅಸಮಾಧಾನ ಬಗೆಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ನಾಯಕರು ಎಲ್ಲರೂ ಸೇರಿ ಒಮ್ಮತದ ನಿರ್ಧಾರ ಮಾಡಿ ಟಿಕೆಟ್ ನೀಡಿದ್ದೇವೆ. ಸಾದಿಕ್ ಪೈಲ್ವಾನ್ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.
ಅಸಮಾಧಾನಗೊಂಡವರನ್ನು ಮನವೊಲಿಸುತ್ತೇವೆ. ನಾವು ಖಂಡಿತ ಗೆದ್ದೇ ಗೆಲ್ಲುತ್ತೇವೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಾಗುವುದು ಎಂದು ಹೇಳಿದರು.
ನಾವು ನುಡಿದಂತೆ ನಡೆದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ದಲಿತರು, ಹಿಂದುಳಿದವರು, ಬಡವರು ಅಲ್ಪಸಂಖ್ಯಾತರು ಎಲ್ಲರೂ ನಮ್ಮ ಪರವಾಗಿದ್ದಾರೆ ಎಂದರು.
ಈ ಉಪಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರ ಮಾತನಾಡಿದ ಅವರು, ಬಿಜೆಪಿಯವರು ಗೆಲ್ಲೋದೇ ಇಲ್ಲ, ಏನ್ ದಿಕ್ಸೂಚಿ ಮಾಡ್ತಾರೆ. ನಾವು ಅಧಿಕಾರದಲ್ಲಿ ಇದ್ದೀವಿ, ಮೂರು ಉಪಚುನಾವಣೆ ಗೆದ್ದಿದೀವಿ. ಈ ಉಪಚುನಾವಣೆ ಸಹ ಗೆಲ್ತೀವಿ ಎಂಬ ಸಂಪೂರ್ಣ ವಿಶ್ವಾಸ ಇದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಕಡೆ ಸೋಲುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.







