by-elections | ಜನ ʼಗ್ಯಾರಂಟಿʼ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ : ಸಿದ್ದರಾಮಯ್ಯ

ದಾವಣಗೆರೆ : ʼದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಬಿಜೆಪಿ, ಆರೆಸ್ಸೆಸ್, ಮೋದಿಯವರ ಬಗ್ಗೆ ಎಂತೆಂಥಾ ಮಾತಾಡಿದ್ದಾರೆ ಗೊತ್ತಾʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸೇರಿರುವ ಇವರೆಲ್ಲಾ ಮೊದಲೆಲ್ಲಾ ಬಿಜೆಪಿ, ಆರೆಸ್ಸೆಸ್, ಮೋದಿಯವರ ಬಗ್ಗೆ ಏನೇನು ಮಾತಾಡಿದ್ದಾರೆ ಎನ್ನುವುದು ನಿಮಗೆ ಗೊತ್ತಿಲ್ಲವಾ ? ಇವರಿಗೆಲ್ಲಾ ನಮ್ಮನ್ನು ಟೀಕಿಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಜನ ಗ್ಯಾರಂಟಿ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ. ಬಿಜೆಪಿ ಬಡವರ ಈ ಗ್ಯಾರಂಟಿಗಳನ್ನು ವಿರೋಧಿಸುತ್ತಿದೆ. ಹೀಗೆ ಬಡವರ ವಿರೋಧಿ, ಸಂವಿಧಾನ ವಿರೋಧಿಯಾಗಿರುವ ಬಿಜೆಪಿಯನ್ನು ಬೆಂಬಲಿಸಲು ರಾಜ್ಯದ ಜನರಿಗೆ ಕಾರಣವೇ ಇಲ್ಲ ಎಂದರು.
ನಾವು ಕುಟುಂಬ ರಾಜಕಾರಣ ಮಾಡಲ್ಲ. ಜನರೇ ನಮ್ಮನ್ನು ಕರೆ ತಂದು ಚುನಾವಣೆಗೆ ನಿಲ್ಲಿಸಿದ್ದಾರೆ ಎನ್ನುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, "ಹಾಗಾದರೆ ಚನ್ನಪಟ್ಟಣದಲ್ಲಿ ಅವರ ಮಗ ಸೋತಿದ್ದು ಏಕೆ ? ಜನ ಬಯಸಿದಾಗ ಚುನಾವಣೆಗೆ ಸ್ಪರ್ಧಿಸುವುದು ತಪ್ಪಲ್ಲ. ಜನ ತಿರಸ್ಕರಿಸಿದಾಗಲೂ ಆ ರೀತಿ ಮಾತಾಡುತ್ತಾರಲ್ಲಾ ಎಂದು ಮರು ಪ್ರಶ್ನಿಸಿದರು.
ಸಚಿವ ಝಮೀರ್ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, " ಝಮೀರ್ ಅವರು ಕೇರಳ, ಬಾಗಲಕೋಟೆ ಸೇರಿ ಎಲ್ಲಾ ಕಡೆ ಕೆಲಸ ಮಾಡಿದ್ದಾರೆ. ಹಾಗೆಯೇ ದಾವಣಗೆರೆಯಲ್ಲೂ ಬಂದು ಪ್ರಚಾರ ಮಾಡಿ ಹೋಗಿದ್ದಾರೆ. ಝಮೀರ್ ಅವರು ಪಕ್ಷದ ಸಿಪಾಯಿ. ಅವರು ಕಾಂಗ್ರೆಸ್ ಪಕ್ಷದ ಪರವಾಗಿ ಮತದಾರರಿಗೆ, ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದರು.
ಛಲವಾದಿ ನಾರಾಯಣಸ್ವಾಮಿ ಮೊದಲು ಕಾಂಗ್ರೆಸ್ ನಲ್ಲಿದ್ದು, ಇಲ್ಲಿ ಲಾಭ ಪಡೆದು ಈಗ ಬಿಜೆಪಿಗೆ ಹೋಗಿ ಅಲ್ಲೂ ಲಾಭ ಮಾಡಿಕೊಂಡಿದ್ದಾರೆ. ಛಲವಾದಿ ನಾರಾಯಸ್ವಾಮಿ ಅವರು ಬಿಜೆಪಿ ಬಗ್ಗೆ ಏನೇನು ಮಾತಾಡಿದ್ದಾರೆ ಗೊತ್ತಾ ಎಂದು ಪ್ರಶ್ನಿಸಿದರು.
ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸೀಟು ಗೆದ್ದಿದ್ದ ಜೆಡಿಎಸ್, ಆ ನಂತರ ಅಷ್ಟು ಸೀಟು ಗೆಲ್ಲಲೇ ಇಲ್ಲ. 19 ಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು.






