ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ : ಶ್ರೀರಾಮುಲು

ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲಿನ ಭೀತಿ ಮತ್ತು ಭಯ ಆರಂಭವಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ತಿಳಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರಕಾರ ಹುಟ್ಟಿದ್ದೇ ಸುಳ್ಳಿನಿಂದ. ಅದಕ್ಕೆ ಈಗಲೂ ಅವರು ಸುಳ್ಳು ಹೇಳುತ್ತಿದ್ದಾರೆ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಗೆದ್ದರೆ ಗ್ಯಾರಂಟಿಗಳನ್ನು ಬಂದ್ ಮಾಡುತ್ತೇವೆ ಎಂದು ಸಿಎಂ ಹೇಳುತ್ತಾರೆ. ಕರ್ನಾಟಕದಲ್ಲಿ ಇರುವುದು ಕಾಂಗ್ರೆಸ್ ಸರಕಾರವೇ ಹೊರತು ಬಿಜೆಪಿ ಸರಕಾರವಲ್ಲ. ಆದ್ದರಿಂದ ಗ್ಯಾರಂಟಿ ನಿಲ್ಲಿಸುವುದಿದ್ದರೆ ಅವರೇ ನಿಲ್ಲಿಸಬೇಕು ಎಂದರು.
ಕಾಂಗ್ರೆಸ್‍ನವರು ಮೊದಲಿನಿಂದಲೂ ಜನರು ದಡ್ಡರು ಅಂತ ತಿಳಿದಿದ್ದಾರೆ. ಆದರೆ ಈಗ ಎರಡೂ ಕಡೆ ಸೋಲುತ್ತಿದ್ದೇವೆ ಎಂಬ ಮನವರಿಕೆ ಅವರಿಗೆ ಅಗಿದೆ. ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಅವರ ಪರವಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಕಾಂಗ್ರೆಸ್‍ಗೆ ಸೋಲಿನ ಭೀತಿ ಪ್ರಾರಂಭವಾಗಿದೆ ಎಂದರು.
2018ರಲ್ಲಿ ಚುನಾವಣೆ ನಡೆದಾಗ ದಲಿತ ನಾಯಕ ಡಾ.ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಆಗಿತ್ತು. ಆಗ ಸಿದ್ದರಾಮಯ್ಯ ಪರಮೇಶ್ವರ್ ಅವರನ್ನು ಸೋಲಿಸಿದರು. ಈಗ ಕಾಲ ಬದಲಾಗಿದೆ. ಅಹಿಂದ ಹೆಸರು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಅಧಿಕಾರ ಹಂಚಿಕೆ ಮಾಡುವಾಗ ಅಹಿಂದ ಇಲ್ಲ. ಬೇಕಾದವರಿಗೆ ಮಾತ್ರ ಅಧಿಕಾರ ಕೊಟ್ಟರು ಎಂದರು.
ಸಿದ್ದರಾಮಯ್ಯ ಅವರಿಗೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೈಯುವುದು ಬಿಟ್ಟು ಬೇರೇನೂ ಗೊತ್ತಿಲ್ಲ. ಯಾವುದೇ ಹೊಸ ವಿಚಾರ ಇಲ್ಲ. ಆದರೆ ಇವರ ಸರಕಾರ ಏನೂ ಮಾಡಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರ ಐಸಿಯು ಸ್ಥಿತಿಯಲ್ಲಿದೆ. ಸುಳ್ಳಿನ ವೆಂಟಿಲೇಟರ್ ಮೇಲೆ ಸರಕಾರ ಇದೆ. ಆ ವೆಂಟಿಲೇಟರ್ ತೆಗೆದರೆ ಸರಕಾರದ ಕಥೆ ಮುಗಿದಂತೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನೀತಿ ಆಯೋಗದ ಸಭೆಗೆ, ಜಿಎಸ್‍ಟಿ ಸಭೆಗಳಿಗೆ ಚಕ್ಕರ್ ಹಾಕಿದ್ದಾರೆ. ಮಧ್ಯ ಏಷ್ಯಾ ದಲ್ಲಿ ಯುದ್ಧ ನಡೆಯುತ್ತಿದೆ. ರಾಜ್ಯಕ್ಕೆ ಸಂಬಂಧಿಸಿದ ಸಭೆ ಕರೆದರೂ ಇವರು ಹೋಗುವುದಿಲ್ಲ. ಇಂತಹವರಿಗೆ ಮೋದಿ ಅವರನ್ನು ಬೈಯುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಗೆಲ್ಲುತ್ತಾರೆ ಎಂಬ ಎಲ್ಲಾ ವಿಶ್ವಾಸ ಇದೆ. ಈ ಬಾರಿ ಎಲ್ಲರೂ ಬಿಜೆಪಿಗೆ ಮತ ನೀಡಲು ಸಂಕಲ್ಪ ಮಾಡಿದ್ದಾರೆ. ಎಲ್ಲಾ ನಾಯಕರು ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.






