ದಾವಣಗೆರೆಯಲ್ಲಿ ಶಂಕಿತ ಉಗ್ರ ಚಟುವಟಿಕೆ ಆರೋಪ: ಉತ್ತರ ಪ್ರದೇಶ ಮೂಲದ ಯುವಕನ ಬಂಧನ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶ ಮೂಲದ 20 ವರ್ಷದ ಸುಹೇಲ್ ಎಂಬ ಯುವಕನನ್ನು ಶಂಕಿತ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬ ಸಂಶಯದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಎಚ್.ಟಿ. ಮಾಹಿತಿ ನೀಡಿದ್ದು, ಸದ್ಯಕ್ಕೆ ಯಾವುದೇ ಸಂಘಟನೆಯೊಂದಿಗೆ ಆರೋಪಿಗೆ ನೇರ ಸಂಪರ್ಕವಿದೆ ಎಂಬುದು ದೃಢಪಟ್ಟಿಲ್ಲ. ಪ್ರಕರಣದ ಕುರಿತು ಈಗಲೇ ಯಾವುದೇ ಅಂತಿಮ ತೀರ್ಮಾನಕ್ಕೆ ಬರುವುದು ಸೂಕ್ತವಲ್ಲ. ಆರೋಪಿಯ ಮೊಬೈಲ್ ಹಾಗೂ ಡಿಜಿಟಲ್ ಮಾಹಿತಿಯ ಸಂಪೂರ್ಣ ಪರಿಶೀಲನೆಯ ಬಳಿಕವೇ ಇತರ ವ್ಯಕ್ತಿಗಳು ಅಥವಾ ಹಿಂದಿನ ಪ್ರಕರಣಗಳೊಂದಿಗೆ ಯಾವುದೇ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಲಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಬಂಧಿತನ ಮೊಬೈಲ್ ಫೋನ್ ಸೇರಿದಂತೆ ಇತರ ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆಯ ಭಾಗವಾಗಿ ಸಾಮಾಜಿಕ ಜಾಲತಾಣಗಳ ಸಂಪರ್ಕಗಳು, ಸಂದೇಶಗಳು ಹಾಗೂ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕವೇ ಆರೋಪಿಯ ಚಟುವಟಿಕೆಗಳ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




