ಸಿದ್ದರಾಮಯ್ಯರೇ ಪೂರ್ಣಾವಧಿ ಸಿಎಂ : ಝಮೀರ್ ಅಹ್ಮದ್

ಜಗಳೂರು: ರಾಜ್ಯದಲ್ಲಿ 2028ರವರೆಗೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ವಸತಿ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಹೇಳಿದ್ದಾರೆ.
ಬುಧವಾರ ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದ ದುರ್ಗಾಂಭಿಕ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧಾರ ಮಾಡಬೇಕು. ಸಿಎಂ ಸಿದ್ದರಾಮಯ್ಯ ದಿಲ್ಲಿಗೆ ಹೊರಟಿಲ್ಲ. ಊಹಾಪೋಹ ಸುದ್ದಿ, ವದಂತಿಗಳಿಗೆ ಕಿವಿಗೊಡಬೇಡಿ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಭದ್ರವಾಗಿದೆ ಎಂದರು.
ಬಳ್ಳಾರಿಯ ಹತ್ಯೆಗೊಳಗಾದ ರಾಜಶೇಖರ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಿದ್ದೇನೆ. 50 ಕೋಟಿ ರೂ. ಕೊಟ್ಟರೂ ರಾಜಶೇಖರ್ ಜೀವ ಮರಳಿ ಬರಲ್ಲ ಎಂದ ಸಚಿವರು, ರಾಜಶೇಖರ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಎರಡು ಬಾರಿ ಮಾಡಿದ ಆರೋಪ ವಿಚಾರ ಸತ್ಯಕ್ಕೆ ದೂರ. ಎರಡು ಬಾರಿ ಮರಣೋತ್ತರ ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಬಿ.ದೇವೇಂದ್ರಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಗಣೇಶ್, ಲತಾ ಮಲ್ಲಿಕಾರ್ಜುನ್, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಶೀರ್ ಅಹ್ಮದ್, ಮುಖಂಡರಾದ ಡಾ.ರವಿಕುಮಾರ್ ಹಾಗೂ ಇತರರಿದ್ದರು.







