ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ರಶೀದ್ ಹಾಜಿಯ ಪತ್ನಿ ಹಫ್ಸಾ ನಿಧನ

ಮಂಗಳೂರು: ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ರಶೀದ್ ಹಾಜಿಯ ಪತ್ನಿ ಹಫ್ಸಾ ರಶೀದ್ (62) ಇಂದು ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉಳ್ಳಾಲ ಮಂಡಲ ಪಂಚಾಯತ್ನ ಪ್ರಧಾನರಾಗಿದ್ದ ಅಬ್ದುಲ್ ರಶೀದ್ ಕಾಂಗ್ರೆಸ್ ಪಕ್ಷದಲ್ಲೂ ಸಕ್ರಿಯರಾಗಿದ್ದರು. ತನ್ನ ಪತ್ನಿ ಹಫ್ಸಾ ಅವರನ್ನೂ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿದ್ದರು. ಹಾಗೇ ಹಫ್ಸಾ ರಶೀದ್ ಅವರು ಉಳ್ಳಾಲದ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸಿದ್ದರು.
ಹಫ್ಸಾ ಅವರು ಗುರುವಾರ ಸಂಜೆ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಅವರನ್ನು ಪಡೀಲ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತರ ದಫನ ಕಾರ್ಯವು ಇಂದು ಮಗ್ರಿಬ್ ವೇಳೆ ಉಳ್ಳಾಲದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪತಿ, ಮೂವರು ಪುತ್ರರು ಮತ್ತು ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
Next Story





