ಜಿನೇಂದ್ರ ಕುಮಾರ್ ಜೈನ್

ಉಪ್ಪಿನಂಗಡಿ: ಶ್ರೀ ಕ್ಷೇತ್ರ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರೂ, ಪ್ರಗತಿಪರ ಕೃಷಿಕರೂ, ಆಲಂತಾಯ ಗ್ರಾಮದ ಪಾಲೇರಿ ನಿವಾಸಿ ಜಿನೇಂದ್ರ ಕುಮಾರ್ ಜೈನ್ (ಚಿನ್ನೆರ್) ರವರು ಮೆದುಳಿನ ರಕ್ತಸ್ರಾವದಿಂದಾಗಿ ಜೂ.24ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಜೂ.23 ಸಂಜೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಜಿನೇಂದ್ರ ಕುಮಾರ್ ಅವರಿಗೆ ಸುಸ್ತು ಕಾಣಿಸಿ ಕೊಂಡಿದ್ದು ಮನೆಗೆ ಬಂದ ಅವರನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊ ಯ್ಯಲಾಗಿತ್ತು. ಆದರೆ ಆ ವೇಳೆಗಾಗಲೇ ರಕ್ತದೊತ್ತಡ ಹೆಚ್ಚಾಗಿ ಮೆದುಳಿನ ರಕ್ತಸ್ರಾವಕ್ಕೊಳಗಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರನ್ನು ಮತ್ತೆ ರಾತ್ರಿಯೇ ಮನೆಗೆ ಕರೆತರಲಾಗಿದ್ದು ಮುಂಜಾನೆ ವೇಳೆ ನಿಧನರಾದರು ಎಂದು ವರದಿಯಾಗಿದೆ.
ಜಿನೇಂದ್ರ ಕುಮಾರ್ ಜೈನ್ ಅವರು ಕಳೆದ ಹಲವು ವರ್ಷಗಳಿಂದ ಕಾಂಚನ ಪೆರ್ಲ ಶ್ರೀ ಷಣ್ಮುಖ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾಗಿದ್ದು ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಹಾಗೂ ಇನ್ನಿತರ ಕೆಲಸಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. 10ಕ್ಕೂ ಹೆಚ್ಚು ವರ್ಷ ನೆಲ್ಯಾಡಿಯಲ್ಲಿ ಅಡಿಕೆ ವ್ಯಾಪಾರ ಮಾಡುತ್ತಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಇವರು ಊರಿನಲ್ಲಿ 'ಚಿನ್ನೆರ್' ಎಂದೇ ಪ್ರಸಿದ್ಧಿ ಪಡೆದುಕೊಂಡಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.