ರಾಯಚೂರು | ಬುದ್ಧಘೋಷ್ ದೇವೇಂದ್ರ ಹೆಗಡೆ ನಿಧನ : ರಾಜಕೀಯ ನಾಯಕರು, ಹೋರಾಟಗಾರರಿಂದ ಸಂತಾಪ

ರಾಯಚೂರು: ದಲಿತಪರ ಹೋರಾಟಗಾರ, ಬೌದ್ಧ ಧರ್ಮದ ಪ್ರಚಾರಕ, ಪುರಸಭೆಯ ಮಾಜಿ ಮುಖ್ಯಾಧಿಕಾರಿ ಹಾಗೂ ನಗರಸಭೆಯ ಮಾಜಿ ಪೌರಾಯುಕ್ತ ಬುದ್ಧಘೋಷ್ ದೇವೇಂದ್ರ ಹೆಗಡೆ (63) ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾದರು.
ಬೌದ್ಧ ದಮ್ಮದ ಕಟ್ಟಾನುಯಾಯಿಯಾಗಿದ್ದ ಹೆಗಡೆ ಅವರು, ಧರ್ಮಪ್ರಚಾರ ಮತ್ತು ಸಂಘಟನೆಗಾಗಿ ತಮ್ಮ ಹಾಡುಗಳನ್ನು ಧ್ವನಿ ಸುರುಳಿ ರೂಪದಲ್ಲಿ ಹೊರತರುವುದರ ಜೊತೆಗೆ ಬೌದ್ಧ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದರು. ದಲಿತ ಹಕ್ಕುಗಳ ಪರವಾಗಿ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.
ದೇವದುರ್ಗ ತಾಲೂಕಿನ ಸುಂಕೇಶ್ವರಹಾಳ ಗ್ರಾಮದವರಾದ ಇವರು, 2021ರ ಫೆ.20ರಂದು ನಡೆದ ದೇವದುರ್ಗ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
ನಗರಾಭಿವೃದ್ಧಿ ಇಲಾಖೆಯಲ್ಲಿ ಪುರಸಭೆ ಮುಖ್ಯಾಧಿಕಾರಿ, ಯೋಜನಾ ನಿರ್ದೇಶಕ ಹಾಗೂ ನಗರಸಭೆಯ ಪೌರಾಯುಕ್ತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಸರ್ಕಾರಿ ಸೇವೆಗೆ ಮುನ್ನ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಿಸಲು ಮತ್ತು ಒಗ್ಗೂಡಿಸಲು ನೀಡಿದ ಅವರ ಕೊಡುಗೆ ಅವಿಸ್ಮರಣೀಯ.
ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸುವ ನಿರ್ಧಾರ ಹೊರಬಂದಾಗ, ಬೌದ್ಧ ಧರ್ಮೀಯರಿಗೆ ಉಪಜಾತಿ ದಾಖಲಿಸುವ ಅವಕಾಶ ಕಲ್ಪಿಸಬೇಕು ಎಂದು ಹೈಕೋರ್ಟ್‌ನಲ್ಲಿ ಶ್ರಮಿಸಿದ್ದರು. ಆದರೆ, ಸಮೀಕ್ಷಾ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಅವರ ನಿಧನ ಸಂಭವಿಸಿರುವುದು ದುಃಖಕರ ಸಂಗತಿ.
ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರರಿದ್ದಾರೆ. ಅವರ ಸ್ವಗ್ರಾಮ ಸುಂಕೇಶ್ವರಹಾಳದ ಖಾಸಗಿ ಜಮೀನಿನಲ್ಲಿ ಸೋಮವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ :
ಬುದ್ಧಘೋಷ್ ದೇವೇಂದ್ರ ಹೆಗಡೆ ನಿಧನಕ್ಕೆ ಮಾಜಿ ಸಂಸದ ಬಿ.ವಿ. ನಾಯಕ, ಮಾಜಿ ಸಚಿವ ಕೆ. ಶಿವನಗೌಡ ನಾಯಕ, ದೇವದುರ್ಗ ಶಾಸಕಿ ಕರೆಮ್ಮಜಿ ನಾಯಕ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್ ಮದರಕಲ್, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಶರಣಗೌಡ ಹೊಸಮನಿ ಹಂಚಿನಾಳ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನರಸಿಂಗರಾವ್ ಸರಕೀಲ್ ಸೇರಿದಂತೆ ಅನೇಕ ರಾಜಕೀಯ ನಾಯಕರು ಹಾಗೂ ದಲಿತ-ಪ್ರಗತಿಪರ ಹೋರಾಟಗಾರರು ಸಂತಾಪ ಸೂಚಿಸಿದ್ದಾರೆ.







