ಚಿರಾಗ್ ಪಕ್ಷಕ್ಕೆ ಡಿಸಿಎಂ ಹುದ್ದೆಗೆ ಆಗ್ರಹ: ಬಿಜೆಪಿ, ಜೆಡಿಯು ವಿರೋಧ

PC: PTI
ಹೊಸದಿಲ್ಲಿ: ಗುರುವಾರ ಪ್ರಮಾಣವಚನ ಸ್ವೀಕರಿಸುವ ಬಿಹಾರದ ನೂತನ ಸರ್ಕಾರದಲ್ಲಿ ಲೋಕಜನಶಕ್ತಿ (ರಾಮ್ ವಿಲಾಸ್) ಪಕ್ಷಕ್ಕೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂಬ ಚಿರಾಗ್ ಪಾಸ್ವಾನ್ ಆಗ್ರಹಕ್ಕೆ ಎನ್ಡಿಎ ಘಟಕ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ವಿರೋಧ ವ್ಯಕ್ತಪಡಿಸಿವೆ.
ಎನ್ಡಿಎ ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳು ಮಂಗಳವಾರ ಈ ಸಂಬಂಧ ಸುಧೀರ್ಘ ಚರ್ಚೆ ನಡೆಸಿದ್ದು, ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು ಬಿಜೆಪಿ ಉಳಿಸಿಕೊಳ್ಳುವ ನಿರ್ಧಾರಕ್ಕೆ ಬಂದಿವೆ. ಜೆಡಿಯು ಕೂಡಾ ಸ್ಪೀಕರ್ ಹುದ್ದೆಯಲ್ಲಿ ಆಸಕ್ತಿ ಹೊಂದಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಆದರೆ ಉಭಯ ಪಕ್ಷಗಳು ಆಕಾಂಕ್ಷೆಗಳನ್ನು ಅಭಿವ್ಯಕ್ತಪಡಿಸಿದ್ದು, ಹೊಸ ಸರ್ಕಾರದ ರಚನೆ ಸಂಬಂಧ ಕಾರ್ಯಯೋಜನೆ ಸಿದ್ಧಪಡಿಸುತ್ತಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಎನ್ಡಿಎ ಕೂಟಕ್ಕೆ ದಲಿತ ಮತಗಳನ್ನು ಕ್ರೋಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ನೇತೃತ್ವದ ಎಲ್ಜೆಪಿ(ಆರ್ವಿ) 19 ಶಾಸಕರನ್ನು ಹೊಂದಿದ್ದು, ಡಿಸಿಎಂ ಹುದ್ದೆಗೆ ಲಾಬಿ ನಡೆಸುತ್ತಿದೆ ಎಂದು ಹೇಳಲಾಗಿದೆ.
ಆದರೆ ನಿರ್ಗಮಿತ ಸರ್ಕಾರದಲ್ಲಿ ಬಿಜೆಪಿ ಎರಡು ಡಿಸಿಎಂ ಹುದ್ದೆಗಳನ್ನು ಹೊಂದಿದ್ದು, ಹೊಸ ವ್ಯವಸ್ಥೆಯಲ್ಲೂ ಅದನ್ನು ಉಳಿಸಿಕೊಳ್ಳಲಿದೆ. ಚಿರಾಗ್ ಅವರ ಭಾವ ಹಾಗೂ ಜಮೂಯಿ ಸಂಸದ ಅರುಣ್ ಭಾರ್ತಿಯವರ ಹೆಸರು ಎಲ್ಜೆಪಿ ಕೋಟಾದಡಿ ಡಿಸಿಎಂ ಹುದ್ದೆಗೆ ಪ್ರಸ್ತಾವಿತವಾಗಿದೆ.
ಜೆಡಿಯು ಸದಸ್ಯರ ಸಂಖ್ಯೆ ಗಣನೀಯ ಹೆಚ್ಚಳವಾಗಿರುವುದು ಮತ್ತು ಎಲ್ಜೆಪಿ(ಆರ್ವಿ) ಹಾಗೂ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ಮೈತ್ರಿಕೂಟಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರಕ್ಕಿಂತ ಹೊಸ ಸರ್ಕಾರ ಭಿನ್ನ ಸಂಯೋಜನೆಯನ್ನು ಹೊಂದಿರಬೇಕಾಗುತ್ತದೆ ಎಂಬ ಕಾರಣಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಮತ್ತು ಕೇಂದ್ರ ಸಚಿವ ಲಲನ್ ಸಿಂಗ್ ಅವರ ಜತೆ ಚರ್ಚೆ ನಡೆಸಿದ್ದಾರೆ.
ಈ ಹಿಂದಿನ ಸರ್ಕಾರದಲ್ಲಿ ಬಿಜೆಪಿ 80 ಶಾಸಕರನ್ನು ಹೊಂದಿದ್ದರೆ, ಜೆಡಿಯು 43 ಶಾಸಕರನ್ನು ಹೊಂದಿತ್ತು. ಆದರೆ ಈ ಬಾರಿ ಸಮೀಕರಣ ಬದಲಾಗಿದ್ದು, ಬಿಜೆಪಿ 89 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಜೆಡಿಯು 85 ಸ್ಥಾನಗಳನ್ನು ಪಡೆದಿದೆ. ಈ ಹಿಂದೆ ಬಿಜೆಪಿ 21 ಸಚಿವರನ್ನು ಹೊಂದಿದ್ದರೆ, ಪ್ರಾದೇಶಿಕ ಪಕ್ಷಗಳ 14 ಸದಸ್ಯರು ಸಂಪುಟದಲ್ಲಿ ಸ್ಥಾನ ಪಡೆದಿದ್ದರು. ಇದರಿಂದ ಜೆಡಿಯು ಕೋಟಾ ಹೆಚ್ಚಲಿದೆ ಎಂದು ತಿಳಿದು ಬಂದಿದೆ.







