ಮಾ.15-16ರಂದು ಸೈಂಟ್ ಆಗ್ನೆಸ್‌ನಲ್ಲಿ ‘ವಿಕಸಿತ ಭಾರತ ಯುವ ಸಂಸತ್ತು’ ಸ್ಪರ್ಧೆ

ಮಂಗಳೂರು, ಮಾ.6: ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ‘ವಿಕಸಿತ ಭಾರತ ಯುವ ಸಂಸತ್ತು’ ಸ್ಪರ್ಧಾ ಕಾರ್ಯಕ್ರಮ ಮಾ. 15 ಮತ್ತು 16ರಂದು ನಗರದ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ನಡೆಯಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶೇಷಪ್ಪ ಅಮೀನ್, ದೇಶದ 300ಕ್ಕೂ ಅಧಿಕ ನೋಡಲ್ ಜಿಲ್ಲೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್, ನೆಹರು ಯುವ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಆಸಕ್ತ 18ರಿಂದ 25 ವರ್ಷದೊಳಗಿನ ಯುವಕರು ‘ಮೈ ಪೋರ್ಟಲ್’ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಪ್ರಥಮ ಹಂತದಲ್ಲಿ ‘ತಮ್ಮ ದೃಷ್ಟಿಯಲ್ಲಿ ವಿಕಾಸ ಭಾರತವೆಂದರೆ ಏನೆಂಬ’ ವಿಷಯದಲ್ಲಿ ಒಂದು ನಿಮಿಷದ ವೀಡಿಯೋವನ್ನು ಮಾ. 9ರೊಳಗೆ ಅಪ್‌ಲೋಡ್ ಮಾಡಬೇಕು. ಮಾ. 10ರಂದು ಸ್ಕ್ರೀನಿಂಗ್ ಸಮಿತಿಯು ಈ ವೀಡಿಯೋ ತುಣುಕುಗಳ ಆಧಾರದಲ್ಲಿ ಪ್ರತಿ ಜಿಲ್ಲೆಯಿಂದ ತಲಾ 50ರಂದು 150 ಯುವಜನರನ್ನು ಆಯ್ಕೆ ಮಾಡಲಿದ್ದಾರೆ. ಆಯ್ಕೆಗೊಂಡ ಯುವಜನರು ‘ಒಂದು ದೇಶ ಒಂದು ಚುನಾವಣೆ’ ಎಂಬ ವಿಷಯದ ಕುರಿತು ಮೂರು ನಿಮಿಷಗಳ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆ ಮಾ. 15ರಂದು ಸಂತ ಆ್ಯಗ್ನೆಸ್ ಕಾಲೇಜಿನಲ್ಲಿ ಬೆಳಗ್ಗೆ 9.30ರಿಂದ ಆರಂಭಗೊಳ್ಳಲಿದೆ. ಮಾ. 16ರವರೆಗೆ ಸ್ಪರ್ಧೆ ನಡೆದು ಐವರು ತೀರ್ಪುಗಾರರ ಸಮಿತಿ 10 ಮಂದಿ ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಿದೆ. ಯುವ ಸಮೂಹಕ್ಕೆ ದೇಶಧ ಸಂವಿಧಾನ ಸಂಸತ್ತಿನ ಕುರಿತು ಅರಿವು ಮೂಡಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಅವರು ವಿವರಿಸಿದರು.
ಗೋಷ್ಟಿಯಲ್ಲಿ ಸೈಂಟ್ ಆ್ಯಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಸಿ. ವೆನಿಸ್ಸಾ, ಎನ್‌ಎಸ್‌ಎಸ್ ಸಂಯೋಜಕ ಡಾ. ಉದಯಕುಮಾರ್, ನೆಹರೂ ಯುವ ಕೇಂದ್ರ ಸಂಯೋಜಕ ಜಗದೀಶ್ ಉಪಸ್ಥಿತರಿದ್ದರು.