ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆಗಳು ಜಾಸ್ತಿ ಶಬ್ಧ ಮಾಡಬೇಕು : ಮಧು ಬಂಗಾರಪ್ಪ

ಹುಬ್ಬಳ್ಳಿ, ಆ.17: ಸುಮಾರು 40 ವರ್ಷದ ಬಳಿಕ ಛಬ್ಬಿ ಗ್ರಾಮದಲ್ಲಿ ಪ್ರೌಢಶಾಲೆ ನಿರ್ಮಾಣ ಮಾಡಲಾಗಿದೆ. ವಿಶೇಷ ಕಾಳಜಿ ಮೂಲಕ ಗ್ರಾಮಕ್ಕೆ ಪ್ರೌಢಶಾಲೆ ಬಂದಿದೆ. ದೇವಸ್ಥಾನದ ಘಂಟೆಗಿಂತ ಶಾಲೆಯ ಘಂಟೆಗಳು ಜಾಸ್ತಿ ಶಬ್ಧ ಮಾಡಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ರವಿವಾರ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ನೂತನ ಸರಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 6500 ಗ್ರಾಮ ಪಂಚಾಯತಿಗಳಿಗೆ ಒಂದು ಕೆಪಿಎಸ್ ಶಾಲೆ ಸ್ಥಾಪನೆ ಆಗಬೇಕು. 4 ಸಾವಿರ ಶಾಲೆಗಳಿಗೆ ದ್ವಿಭಾಷೆ(ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ) ಅಳವಡಿಸಲಾಗುತ್ತಿದೆ. 5 ಸಾವಿರ ಎಲ್‍ಕೆಜಿ, ಯುಕೆಜಿ ಶಾಲೆ ತೆರೆಯಲಾಗುವುದು. 25 ಸಾವಿರ ಮಕ್ಕಳಿಗೆ ಉಚಿತವಾಗಿ ನೀಟ್, ಜೆಇಇ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿನ ಸಾಕ್ಷರತೆ ಪ್ರಮಾಣ ಶೇ.20 ರಿಂದ 25 ರಷ್ಟು ಇತ್ತು. ಇಂದು ಶೇ.75ರಷ್ಟು ಸಾಕ್ಷರತೆ ಸಾಧಿಸಲಾಗಿದೆ. ಆದರೆ, ಶೇ.87ರಷ್ಟು ಯುವಕರು ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ ಎಂದು ಹೇಳಿದರು.
ದೇಶದಲ್ಲಿರುವ ಪರಿಸ್ಥಿತಿಯನ್ನು ಇದ್ದ ಹಾಗೆ ಹೇಳಬೇಕು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜನರು ಮುಂದಾಗಬೇಕು. ಸಮಾಜದಲ್ಲಿ ಬದಲಾವಣೆ ಆಗಬೇಕಿದ್ದರೆ ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲಿ ನಾವು ಸಾಗಬೇಕಿದೆ. ಎಲ್ಲರಿಗೂ ಸಮಪಾಲು ಸಮಬಾಳು ಸಿಗಬೇಕು. ಎಲ್ಲರನ್ನೂ ಗೌರವದಿಂದ ಕಾಣಬೇಕು. ಆಗ ದೇಶದ ಏಕತೆ ಎಂದೂ ಅಳಿಯುವುದಿಲ್ಲ ಎಂದು ಅವರು ಹೇಳಿದರು.
ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹೆತ್ತ ತಂದೆ ತಾಯಿಯನ್ನು ಮೊದಲು ಗೌರವಿಸಬೇಕು. ಗ್ರಾಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕಾಗುತ್ತದೆ. ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಎಂ.ಆರ್.ಪಾಟೀಲ್, ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ.ಮಜ್ಜಗಿ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಬೊಮ್ಮಕ್ಕನವರ, ಛಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷ ರವಿ ಹುಲ್ಲಂಬಿ, ಸದಸ್ಯರು, ಪಿಡಿಒ ಚಂದ್ರಶೇಖರ ಪೂಜಾರಿ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.







