ಯೂಟ್ಯೂಬರ್ ಪ್ರೇಮ ವಿವಾಹ ಪ್ರಕರಣ | ಸ್ವಇಚ್ಛೆಯಿಂದ ಮದುವೆ ಆಗಿದ್ದೇನೆ : ಯುವತಿಯ ಸ್ಪಷ್ಟನೆ

ಮುಕಳೆಪ್ಪ ಅಲಿಯಾಸ್ ಖ್ವಾಜಾ/ಗಾಯತ್ರಿ
ಧಾರವಾಡ, ಸೆ.21 : ಮುಕಳೆಪ್ಪ ಜೊತೆ ನಾನು ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಯೂಟ್ಯೂಬರ್ ಪ್ರೇಮ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಯೂಟ್ಯೂಬರ್ ಮುಕಳೆಪ್ಪ ಅಲಿಯಾಸ್ ಖ್ವಾಜಾ ಎಂಬಾತ ತನ್ನ ಪುತ್ರಿ ಗಾಯತ್ರಿಯನ್ನು ಲವ್ ಜಿಹಾದ್ಗೆ ಒಳಗಾಗಿಸಿ ಮದುವೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಯುವತಿಯ ತಾಯಿ ಶಿವಕ್ಕಾ ಜಾಲಿಹಾಳ ಶನಿವಾರ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ವೀಡಿಯೊ ಮಾಡಿ ಸ್ಪಷ್ಟೀಕರಣ ನೀಡಿದ ಗಾಯತ್ರಿ, ಮುಕಳೆಪ್ಪ(ಖ್ವಾಜಾ) ಜೊತೆ ನಾನು ಸ್ವಇಚ್ಛೆಯಿಂದ ಮದುವೆ ಆಗಿದ್ದೇನೆ. ಯಾರೋ ನನ್ನ ತಾಯಿಯ ಮೈಂಡ್ ವಾಶ್ ಮಾಡಿದ್ದಾರೆ. ನನ್ನ ತಾಯಿ ಮೊದಲು ನನ್ನನ್ನು ಬೆಂಬಲಿಸಿದ್ದಳು ಎಂದು ತಿಳಿಸಿದ್ದಾರೆ.
ನನ್ನ ತಾಯಿ ಒಪ್ಪಿಗೆ ಇರುವ ದಾಖಲೆಗಳು ನನ್ನ ಹತ್ತಿರ ಇದೆ. ಈ ದಾಖಲೆಗಳನ್ನು ಆದಷ್ಟು ಬೇಗ ಜನರ ಮುಂದೆ ಇಡುತ್ತೇನೆ. ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ. ನನಗೆ ಕಾನೂನು ಮೇಲೆ ಗೌರವ ಇದ್ದು, ನ್ಯಾಯ ಸಿಗುವ ಭರವಸೆ ಇದೆ ಎಂದು ಗಾಯತ್ರಿ ಹೇಳಿದ್ದಾರೆ.







