ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ: ಜಗದೀಶ್ ಶೆಟ್ಟರ್

ಧಾರವಾಡ, ಅ. 20: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸರಕಾರಿ ನೌಕರರಿಗೆ ಅವಕಾಶವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರುವುದು ಸರಿಯಲ್ಲ. ಪಥಸಂಚಲನದಲ್ಲಿ ಭಾಗವಹಿಸಿದ್ದ ಸರಕಾರಿ ನೌಕರನ ಅಮಾನತು ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪಿಸಿದರು.
1966ರಲ್ಲಿ ನೆಹರೂ, ಆರೆಸ್ಸೆಸ್ ಮತ್ತು ಇಸ್ಲಾಂ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಭಾಗವಹಿಸಬಾರದು ಎಂದು ಆದೇಶ ಮಾಡಿದ್ದರು. 1970ರಲ್ಲಿ ಅದು ತಿದ್ದುಪಡಿಯಾಗಿದ್ದು, 1980ರಲ್ಲಿ ಮತ್ತೊಮೆ ತಿದ್ದುಪಡಿ ಮಾಡಲಾಗಿದೆ. ಮೋದಿ ಪ್ರಧಾನಿಯಾಗಿ 2024ರಲ್ಲಿ ಸಂಘದ ಚಟುವಟಿಕೆ ನಡೆಸುವ ಬಗ್ಗೆ ಮತ್ತೊಂದು ಆದೇಶ ಮಾಡಿದ್ದಾರೆ ಎಂದರು.
ಸರಕಾರಿ ನೌಕರರಿಗೆ ಆರೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ವಜಾ ಆದವರು ಕೋರ್ಟ್‍ಗೆ ಹೋದರೆ ಅಮಾನತು ಆದೇಶವನ್ನು ರದ್ದಾಗಲಿದೆ ಎಂದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಚುಟುವಟಿಕೆಗಳ ಬಗ್ಗೆ 2013ರಲ್ಲಿ ಬಿಜೆಪಿಯೇ ಈ ಆದೇಶ ಮಾಡಿದೆ. ಆದರೆ, ಆ ಆದೇಶವನ್ನು ಈ ಸರಕಾರದವರು ಸರಿಯಾಗಿ ನೋಡಿದ್ದಾರೆಯೇ? ಎಂದು ಪ್ರಶ್ನಿಸಿದರು.





