ಧಾರವಾಡ : ವಿದ್ಯಾರ್ಥಿನಿ ಆತ್ಮಹತ್ಯೆ

ಧಾರವಾಡ : ವಿದ್ಯಾರ್ಥಿನಿಯೋರ್ವಳು ರೈಲ್ವೆ ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಧಾರವಾಡ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ.
ಬಳ್ಳಾರಿ ಮೂಲದ ಕಗ್ಗಲ್ ಗ್ರಾಮದ ಪಲ್ಲವಿ (24) ಆತ್ಮಹತ್ಯೆಗೈದ ವಿದ್ಯಾರ್ಥಿನಿ. ಆಕೆ ನೇಮಕಾತಿ ಪರೀಕ್ಷೆ ತಯಾರಿಗಾಗಿ ಧಾರವಾಡಕ್ಕೆ ಆಗಮಿಸಿದ್ದಳು ಎಂದು ತಿಳಿದು ಬಂದಿದೆ.
ಆರೋಗ್ಯ ಸಮಸ್ಯೆ, ಕೌಟುಂಬಿಕ ಸಮಸ್ಯೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪಲ್ಲವಿ ಡೆತ್ ನೋಟ್ ಬರೆದಿಟ್ಟಿದ್ದಾಳೆ ಎನ್ನಲಾಗಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ನೇಮಕಾತಿ ವಿಳಂಬ ಕಾರಣಕ್ಕೆ ಪಲ್ಲವಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ʼಕೆಲವರು ವಿನಾಕಾರಣ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ವಿದ್ಯಾರ್ಥಿಗಳ ಮನೋಸ್ಥೆರ್ಯ ಕುಗ್ಗಿಸುವ ಕೆಲಸ ಯಾರೂ ಮಾಡಬಾರದು. ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದುʼ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕುಟುಂಬಸ್ಥರ ಸ್ಪಷ್ಟನೆ : ಪಲ್ಲವಿಗೆ ಆರೋಗ್ಯ ಸಮಸ್ಯೆ ಇತ್ತು. ಅಲ್ಲದೆ, ಆಕೆ ಪೊಲೀಸ್ ಇಲಾಖೆ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಳು. ಆದರೆ, ಅಂತಿಮ ಸುತ್ತಿಗೆ ಆಯ್ಕೆಯಾಗಿರಲಿಲ್ಲ. ಹೀಗಾಗಿ ಮತ್ತೆ ಸ್ಪರ್ಧಾ ಪರೀಕ್ಷೆ ಎದುರಿಸಲು ಧಾರವಾಡಕ್ಕೆ ಬಂದಿದ್ದಳು. ಮಗಳು ಓದುತ್ತಾಳೆ ಅನ್ನುವ ನಂಬಿಕೆ ಇತ್ತು. ಆದರೆ, ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಪಲ್ಲವಿ ತಂದೆ ಉತ್ತೆಪ್ಪ ಹೇಳಿದ್ದಾರೆ.







