ಕಳಪೆ ಆಹಾರ, ಚಿಕಿತ್ಸೆ ಕೊರತೆ ಆರೋಪ : ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಂದ ಪ್ರತಿಭಟನೆ

ಧಾರವಾಡ: ಕಳಪೆ ಗುಣಮಟ್ಟದ ಆಹಾರ ಹಾಗೂ ಸಮರ್ಪಕ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿ ಕೇಂದ್ರ ಕಾರಾಗೃಹದ 20ಕ್ಕೂ ಹೆಚ್ಚು ಕೈದಿಗಳು ಸತ್ಯಾಗ್ರಹ ಆರಂಭಿಸಿದ್ದಾರೆ. ಜೈಲು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೈದಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಶನಿವಾರ ಬೆಂಗಳೂರು ಮೂಲದ ಕೈದಿ ಆನಂದಕುಮಾರ್ ನೇತೃತ್ವದಲ್ಲಿ ಕೈದಿಗಳು ಜೈಲು ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಮೆಚ್ಚಿಸಲು ಜೈಲು ಅಧಿಕಾರಿಗಳು ಕೈದಿಗಳಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜೈಲಿನಲ್ಲಿ ವೈರಲ್ ಜ್ವರದಿಂದ ಹಲವು ಕೈದಿಗಳು ಬಳಲುತ್ತಿದ್ದರೂ ಸೂಕ್ತ ಚಿಕಿತ್ಸೆ ನೀಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ಆನಂದಕುಮಾರ್, ಜೈಲು ಆವರಣದಲ್ಲಿದ್ದ ಮರ ಏರಿ ಪ್ರತಿಭಟನೆ ನಡೆಸಿದರು.
ಸಬ್ ಜೈಲಿನಲ್ಲಿ ಕೈದಿ ಆತ್ಮಹತ್ಯೆಗೆ ಯತ್ನ :
ಇನ್ನೊಂದೆಡೆ, ಧಾರವಾಡ ಸಬ್ ಜೈಲಿನಲ್ಲಿ ಕೈದಿಯೊಬ್ಬ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಮೀರಜ್ ಮೂಲದ ಮಹೇಶ್ ಎಂಬ ಕೈದಿ ಕೊಲೆ ಪ್ರಕರಣದಲ್ಲಿ ಕಳೆದ ಒಂದೂವರೆ ವರ್ಷದಿಂದ ಜೈಲಿನಲ್ಲಿದ್ದಾನೆ. ಅಸ್ವಸ್ಥಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.






