ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧ: ಪ್ರಹ್ಲಾದ್ ಜೋಶಿ
ಕಬ್ಬಿನ ಎಫ್ಆರ್ಪಿ, ಎಥನಾಲ್ ಖರೀದಿ ನೀತಿ ಹಾಗೂ ಕಬ್ಬಿನ ತೂಕ, ರಿಕವರಿ ಮತ್ತು ವೇಸ್ಟೇಜ್ ಸಮಸ್ಯೆಗಳ ಕುರಿತು ಸಮಿತಿ ರಚನೆ

ಹುಬ್ಬಳ್ಳಿ: ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಸೆ.29 ಹುಬ್ಬಳ್ಳಿಯಲ್ಲಿ ಪ್ರತಿಭಟನಾ ವೇಳೆ ದೆಹಲಿಯಲ್ಲಿ ರೈತರು ಸಭೆಗೆ ಬಂದು ಮಾತುಕತೆ ನಡೆಸುವುದಾಗಿ ಹೇಳಿ ನಂತರ ಸಭೆಯ ತೀರ್ಮಾನವನ್ನ ರಾಜ್ಯ ಸರ್ಕಾರದ ಪ್ರತಿನಿಧಿ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ರೈತ ನಾಯಕರು ತಿರಸ್ಕರಿಸಿದ್ದು ಸರಿಯಾದ ಕ್ರಮವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರೈತರ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ), ಎಥನಾಲ್ ಖರೀದಿ ನೀತಿ, ಕಬ್ಬಿನ ರಿಕವರಿ, ತೂಕ ಹಾಗೂ ವೇಸ್ಟೇಜ್ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ರೈತರ ಹಿತಾಸಕ್ತಿ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ರೈತರ ಬೇಡಿಕೆಗಳ ಪರಿಶೀಲನೆಗೆ ಸಮಿತಿ
ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಪರಿಶೀಲಿಸಲು ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಸಮಿತಿಯು ರೈತರ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಶೀಘ್ರವೇ ಶಿಫಾರಸುಗಳನ್ನು ಸಲ್ಲಿಸಲಿದೆ. ಸಮಿತಿಯ ವರದಿಯ ಆಧಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಬ್ಬಿನ ಬೆಲೆ ಹೆಚ್ಚಳ ಸೇರಿದಂತೆ ರೈತರ ಬೇಡಿಕೆಗಳನ್ನು ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ. ಕೃಷಿ ದೇಶದ ಆರ್ಥಿಕತೆಯ ಪ್ರಮುಖ ಭಾಗವಾಗಿದ್ದು, ರೈತರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಭತ್ತ ಮತ್ತು ಗೋಧಿ ಬೆಳೆಗಳ ಖರೀದಿಯಲ್ಲಿ ರೈತರು ಬೆಳೆದ ಪ್ರಮಾಣಕ್ಕೆ ಅನುಗುಣವಾಗಿ ಖರೀದಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಂಗ್ರಹಣೆಯ ಸಮಸ್ಯೆ ಎದುರಾದರೂ ಖರೀದಿ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ ಎಂದು ಹೇಳಿದರು.
ಎಥನಾಲ್ ಖರೀದಿಯಿಂದ ಕಬ್ಬು ಬೆಳೆಗಾರರಿಗೆ ನೆರವು
ಎಥನಾಲ್ ಖರೀದಿ ನೀತಿಯು ಕಬ್ಬು ಬೆಳೆಗಾರರಿಗೆ ಪರೋಕ್ಷವಾಗಿ ನೆರವಾಗಿದೆ ಎಂದು ಸಚಿವರು ವಿವರಿಸಿದರು. 2014ಕ್ಕೂ ಮೊದಲು ಎಥನಾಲ್ ಖರೀದಿ ಪ್ರಮಾಣ ಕಡಿಮೆ ಇತ್ತು. ಈಗ ದೇಶದಲ್ಲಿ ಎಥನಾಲ್ ಖರೀದಿ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಕರ್ನಾಟಕದಿಂದಲೂ ಸುಮಾರು 165 ಕೋಟಿ ಲೀಟರ್ ಎಥನಾಲ್ ಖರೀದಿಸಲಾಗುತ್ತಿದೆ ಎಂದು ತಿಳಿಸಿದರು.
ಸಕ್ಕರೆ ಬೆಲೆ ಕುಸಿದಾಗ ಹೆಚ್ಚುವರಿ ಕಬ್ಬನ್ನು ಎಥನಾಲ್ ಉತ್ಪಾದನೆಗೆ ಬಳಸುವುದು ಹಾಗೂ ರಫ್ತು ನೀತಿಯ ಮೂಲಕ ಸಕ್ಕರೆ ಕಾರ್ಖಾನೆಗಳು ಮತ್ತು ರೈತರ ನಷ್ಟವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಎಥನಾಲ್ ಉತ್ಪಾದನೆಗೆ ಸ್ಥಿರವಾದ ನೀತಿ ರೂಪಿಸಿರುವುದರಿಂದ ಕಬ್ಬಿನ ಬೆಲೆ ಕುಸಿತವನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದರು.
ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಕಬ್ಬಿನಿಂದ ಎಥನಾಲ್ ಉತ್ಪಾದನೆ ನಡೆಯುತ್ತಿದೆ. ಆದರೆ ಧಾನ್ಯಗಳಿಂದ ಉತ್ಪಾದಿಸುವ ಎಥನಾಲ್ ಕೂಡ ಮಾರುಕಟ್ಟೆಯಲ್ಲಿರುವುದರಿಂದ ಕಬ್ಬಿನಿಂದ ಉತ್ಪಾದನೆಯಾಗುವ ಸಂಪೂರ್ಣ ಎಥನಾಲ್ ಖರೀದಿಸುವಲ್ಲಿ ಕೆಲವು ಮಿತಿಗಳಿವೆ. ಈ ಹಿನ್ನೆಲೆಯಲ್ಲಿ ಕಬ್ಬಿನಿಂದ ಉತ್ಪಾದಿಸುವ ಎಥನಾಲ್ ಖರೀದಿ ಪ್ರಮಾಣ ಹೆಚ್ಚಿಸುವ ಕುರಿತು ಪೆಟ್ರೋಲಿಯಂ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಸಕ್ಕರೆ ಬೆಲೆಯಲ್ಲೂ ಸಮತೋಲನ ಅಗತ್ಯ
ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಬಾರದು ಎಂಬ ಕಾರಣಕ್ಕೆ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ನಿಗದಿಪಡಿಸಲಾಗಿದೆ. ಪ್ರಸ್ತುತ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪ್ರತಿ ಕೆ.ಜಿ.ಗೆ 31 ರೂ.ಇದ್ದು, ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಸಕ್ಕರೆ ಕಾರ್ಖಾನೆಗಳಿಗೆ ಅತಿಯಾದ ಲಾಭವಾಗಬಾರದು; ಅದೇ ರೀತಿ ರೈತರಿಗೆ ನಷ್ಟವಾಗಬಾರದು ಮತ್ತು ಗ್ರಾಹಕರಿಗೂ ಸಕ್ಕರೆ ಖರೀದಿಯಲ್ಲಿ ತೊಂದರೆಯಾಗಬಾರದು. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದರು.
ಕಬ್ಬಿನ ತೂಕ, ರಿಕವರಿ ಸಮಸ್ಯೆಗಳಿಗೆ ಕ್ರಮ
ಕಬ್ಬು ಬೆಳೆಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ತೂಕದಲ್ಲಿ ವ್ಯತ್ಯಾಸ, ಸಕ್ಕರೆ ರಿಕವರಿ ಲೆಕ್ಕಾಚಾರ ಮತ್ತು ವೇಸ್ಟೇಜ್ ಪ್ರಮಾಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಇತರ ರಾಜ್ಯಗಳಲ್ಲಿ ವೇಸ್ಟೇಜ್ ಪ್ರಮಾಣ ಶೇ.5ರಿಂದ 6ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ.8ರಷ್ಟು ದಾಖಲಾಗುತ್ತಿರುವ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾಂತ್ರಿಕವಾಗಿ ಕಬ್ಬು ಕೊಯ್ಲು ಮಾಡುವಾಗ ವೇಸ್ಟೇಜ್ ಲೆಕ್ಕಾಚಾರದಲ್ಲಿಯೂ ವ್ಯತ್ಯಾಸಗಳಾಗುತ್ತಿವೆ ಎಂಬ ಆರೋಪಗಳಿವೆ. ಈ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ಕಬ್ಬಿನ ತೂಕ ಮತ್ತು ರಿಕವರಿ ಲೆಕ್ಕಾಚಾರದಲ್ಲಿ ಪಾರದರ್ಶಕತೆ ತರಲು ಪ್ರಯೋಗಾಲಯಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಲಾಗುವುದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಎಫ್ಆರ್ಪಿ ಹೆಚ್ಚಳದ ಬಗ್ಗೆ ಚಿಂತಿಸಲಿ
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ರಾಜ್ಯ ಸರ್ಕಾರವೂ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸಚಿವರು ಹೇಳಿದರು. ಕಬ್ಬಿನ ಬೆಲೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಈ ವಿಚಾರದಲ್ಲಿ ಇತರ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ, ರೈತರ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದು, ರೈತರ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಸ್ಟಿಂಗ್ ಆಪರೇಷನ್ ಕುರಿತು ಎಸ್ಐಟಿ ತನಿಖೆಗೆ ಆಗ್ರಹ
ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಸಚಿವರು, ಆರೋಪ-ಪ್ರತ್ಯಾರೋಪಗಳ ಬದಲಿಗೆ ಸತ್ಯಾಂಶ ಹೊರಬರಲು ಸ್ವತಂತ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಸ್ಟಿಂಗ್ ಆಪರೇಷನ್ನಲ್ಲಿ ಯಾರು ಭಾಗಿಯಾಗಿದ್ದಾರೆ, ಅದರ ಹಿಂದಿನ ಉದ್ದೇಶವೇನು ಹಾಗೂ ಪ್ರಸಾರವಾಗುತ್ತಿರುವ ವಿಷಯಗಳ ಸತ್ಯಾಸತ್ಯತೆ ಏನು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ತನಿಖೆ ನಡೆಸಬೇಕು ಅಥವಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕ ದ್ವೇಷಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕ ಜೀವನದಲ್ಲಿ ನೈತಿಕತೆ ಕಾಪಾಡುವುದು ಮುಖ್ಯ. ಆದರೆ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ತನಿಖೆ ನಡೆಸದೆ ಪರಸ್ಪರ ಆರೋಪ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ರೈತರ ಸಮಸ್ಯೆಗಳಿಗೆ ಆದ್ಯತೆ ನೀಡಲಿ
ರಾಜ್ಯದಲ್ಲಿ ಕಬ್ಬಿನ ಬೆಲೆ, ಬರ ಪರಿಹಾರ, ಕುಡಿಯುವ ನೀರು ಮತ್ತು ರೈತರ ಆರ್ಥಿಕ ಸಂಕಷ್ಟದಂತಹ ಪ್ರಮುಖ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯಾಗಬೇಕು. ರೈತರಿಗೆ ಘೋಷಿಸಿದ ಪರಿಹಾರಗಳು ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಸಚಿವರು ಹೇಳಿದರು.
ರೈತರ ಬೇಡಿಕೆಗಳನ್ನು ಆಲಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ರೈತರು ತಮ್ಮ ಪ್ರತಿನಿಧಿಗಳ ಮೂಲಕ ಶಾಂತಿಯುತವಾಗಿ ಚರ್ಚೆಗೆ ಮುಂದಾಗಬೇಕು. ಸಮಿತಿಯು ಶೀಘ್ರದಲ್ಲೇ ರೈತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಲಿದೆ. ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದರು.






