ಕೆಪಿಎಸ್ಸಿ ಹಗರಣ ಬಿಜೆಪಿಯ ಕೂಸು : ಸಿಎಂ ಡಿ.ಕೆ.ಶಿವಕುಮಾರ್
ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಪ್ರಯುಕ್ತ 'ಪದವೀಧರರೊಂದಿಗೆ ಸಂವಾದ ಸಭೆ'

ಹುಬ್ಬಳ್ಳಿ : "ಕೆಪಿಎಸ್ಸಿ ಹಗರಣ ಬಿಜೆಪಿಯ ಕೂಸು. ವಿದ್ಯಾರ್ಥಿಗಳು ಮತ್ತು ಪದವೀಧರರಿಗೆ ಅವರ ಅರ್ಹತೆಯ ಆಧಾರದ ಮೇಲೆ ಉದ್ಯೋಗ ದೊರೆಯಬೇಕು. ಹಣದ ವ್ಯವಹಾರ, ಒತ್ತಡ ಅಥವಾ ಪ್ರಭಾವಕ್ಕೆ ಅವಕಾಶವಿಲ್ಲದ ನ್ಯಾಯಸಮ್ಮತ ಪರೀಕ್ಷಾ ವ್ಯವಸ್ಥೆಯನ್ನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ಪ್ರಯುಕ್ತ ಶನಿವಾರ ಹಮ್ಮಿಕೊಂಡಿದ್ದ 'ಪದವೀಧರರೊಂದಿಗೆ ಸಂವಾದ ಸಭೆ'ಯಲ್ಲಿ ಮಾತನಾಡಿದರು.
"ನೀಟ್, ಎಸ್ಐ ಸೇರಿದಂತೆ ವಿವಿಧ ನೇಮಕಾತಿ ಮತ್ತು ಪರೀಕ್ಷಾ ವ್ಯವಸ್ಥೆಗಳಲ್ಲಿ ಹಗರಣಗಳ ಆರೋಪಗಳು ಕೇಳಿಬರುತ್ತಿವೆ. ದೇಶದಲ್ಲಿ ಉದ್ಯೋಗದ ಸಮಸ್ಯೆ ತೀವ್ರವಾಗಿರುವ ಸಂದರ್ಭದಲ್ಲಿ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಅತ್ಯಂತ ಮುಖ್ಯ" ಎಂದು ತಿಳಿಸಿದರು.
"ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾದ ಬಳಿಕ ಸರ್ಕಾರವೂ ವರದಿ ತರಿಸಿಕೊಂಡು ಪರಿಶೀಲನೆ ನಡೆಸಿದೆ. ಹಗರಣ ನಡೆದಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆಗೆ ಸರ್ಕಾರ ಸಹಕಾರ ನೀಡಿದೆ. ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂಬುದು ಸರ್ಕಾರದ ನಿಲುವು" ಎಂದು ಹೇಳಿದರು.
ಬಿಜೆಪಿಗೆ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ
"ಬಿಜೆಪಿಯವರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಕಾರಣಕ್ಕೆ ಹೆಸರಿಗಷ್ಟೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ಉದ್ದೇಶದಿಂದ ಅಭ್ಯರ್ಥಿಯನ್ನು ನಿಲ್ಲಿಸಿದಂತೆ ಕಾಣುತ್ತಿಲ್ಲ. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸಾಕಷ್ಟು ಗೊಂದಲ ಎದುರಿಸಿತ್ತು. ಹೊಸ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದೆ ಕೊನೆಗೆ ನಿರ್ಧಾರ ಕೈಗೊಂಡಿದ್ದಾರೆ. ಹೀಗಿರುವಾಗ ಬಿಜೆಪಿ ಅಭ್ಯರ್ಥಿಗೆ ಮತ ನೀಡುವುದರಿಂದ ಏನು ಪ್ರಯೋಜನ ಎಂಬುದನ್ನು ಮತದಾರರು ಆಲೋಚಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರಿಗೆ ಮತ ನೀಡಿ" ಎಂದು ಮನವಿ ಮಾಡಿದರು.
"ಮೋಹನ್ ಅವರು ನಮ್ಮ ಪಕ್ಷದ ಸಕ್ರಿಯ ಮುಖಂಡರಾಗಿದ್ದಾರೆ. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಅವರ ಹೆಸರು ಮುಂಚೂಣಿಯಲ್ಲಿತ್ತು. ಪದವೀಧರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೊದಲು ಸಮೀಕ್ಷೆ ನಡೆಸಲಾಗಿದ್ದು, ಸಮೀಕ್ಷೆಯಲ್ಲಿ ಹೆಚ್ಚಿನವರು ಮೋಹನ್ ಲಿಂಬಿಕಾಯಿ ಅವರ ಹೆಸರನ್ನು ಸೂಚಿಸಿದ್ದರು. ಪಕ್ಷದ ಹಲವು ನಾಯಕರೊಂದಿಗೆ ಚರ್ಚಿಸಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ" ಎಂದು ತಿಳಿಸಿದರು.
"ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪದವೀಧರ ಮತದಾರರು ಒಗ್ಗಟ್ಟಿನಿಂದ ಕೆಲಸ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು" ಎಂದು ಮನವಿ ಮಾಡಿದರು.
ಉದ್ಯೋಗ ಸೃಷ್ಟಿಗೆ ಸರ್ಕಾರದ ಆದ್ಯತೆ
"ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿದೆ. ಕೇಂದ್ರ ಸರ್ಕಾರ ವರ್ಷಕ್ಕೆ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಆ ಭರವಸೆ ಈಡೇರಿಲ್ಲ. ರಾಜ್ಯ ಸರ್ಕಾರ ಉದ್ಯೋಗ ಸೃಷ್ಟಿ ಮತ್ತು ಯುವಜನರಿಗೆ ಅವಕಾಶ ಕಲ್ಪಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ" ಎಂದರು.
ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆ
"ಖಾಸಗಿ ವಲಯದಲ್ಲಿಯೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಖಾಸಗಿ ಉದ್ಯೋಗ ವಿನಿಮಯ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಉದ್ಯೋಗ ನೀಡುವ ಸಂಸ್ಥೆಗಳು ಮತ್ತು ಉದ್ಯೋಗ ಹುಡುಕುವ ಅಭ್ಯರ್ಥಿಗಳು ಒಂದೇ ವೇದಿಕೆಯಲ್ಲಿ ನೋಂದಾಯಿಸಿಕೊಂಡು, ಅರ್ಹತೆಗೆ ಅನುಗುಣವಾಗಿ ಉದ್ಯೋಗ ಪಡೆಯಲು ಇದರಿಂದ ನೆರವಾಗಲಿದೆ" ಎಂದು ತಿಳಿಸಿದರು.
ಎಸ್ಐ ಆರ್ ಬಗ್ಗೆ ಎಚ್ಚರವಹಿಸಿ
"ಎಸ್ ಐಆರ್ ಮೂಲಕ ಮತಗಳನ್ನು ತೆಗೆದುಗಾಕಲಾಗುತ್ತಿದೆ. ಇದರ ಬಗ್ಗೆಯೂ ಗಮನ ಹರಿಸಬೇಕು. ವಿದ್ಯಾವಂತರು ಎಚ್ಚರಿಕೆಯಿಂದ ಇರಬೇಕು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರದಲ್ಲೂ ಕಾಂಗ್ರೆಸ್ ಹೋರಾಟ ನಡೆಸಿದೆ. ಒಂದು ಕ್ಷೇತ್ರದಲ್ಲಿ 10ರಿಂದ 12 ಸಾವಿರ ಮತಗಳನ್ನು ಅಳಿಸಲು ಪ್ರಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರು ತಮ್ಮ ಕೆಲಸಗಳನ್ನು ಬದಿಗಿಟ್ಟು ಹೋರಾಟ ನಡೆಸಿ, ಮತದಾರರ ಹಕ್ಕುಗಳನ್ನು ರಕ್ಷಿಸಲು ಮುಂದಾಗಿದ್ದರು. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ದೊರೆಯಬೇಕು ಎಂಬ ಉದ್ದೇಶದಿಂದ ದೆಹಲಿಗೂ ತೆರಳಿ ಹೋರಾಟ ನಡೆಸಿದ್ದೇವೆ. ನನಗೆ 48 ವರ್ಷವಿದ್ದಾಗ ಪದವಿಯನ್ನು ಪಡೆದುಕೊಂಡೆ ಈಗ ನಾನು ಕೂಡ ಪದವೀಧರ ನನಗೂ ಸಹ ಮತದಾನ ಮಾಡುವ ಹಕ್ಕು ಬಂದಿದೆ" ಎಂದು ತಿಳಿಸಿದರು.






