ಸ್ಟಿಂಗ್ ಕಾರ್ಯಾಚರಣೆಯ ಬಗ್ಗೆ ಸಿಎಂ ಎಚ್ಚರಿಸಿದ್ದರು : ಸಚಿವ ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ
ಧಾರವಾಡ: ಮಾಧ್ಯಮಗಳಲ್ಲಿ ಸ್ಟಿಂಗ್ ಕಾರ್ಯಾಚರಣೆಯ ಬಗ್ಗೆ ವರದಿಗಳು ಪ್ರಸಾರವಾಗುವವರೆಗೆ ಈ ವಿಚಾರ ಸದ್ದು ಮಾಡುತ್ತದೆ. ಏಜೆನ್ಸಿಯವರು ನಿಮ್ಮ ಹಿಂದೆ ಇದ್ದಾರೆ, ಹಾಗಾಗಿ ಹುಷಾರಾಗಿರಿ ಎಂದು ಮುಖ್ಯಮಂತ್ರಿ ತಮಗೆ ಸೂಚಿಸಿದ್ದರು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಸ್ಟಿಂಗ್ ಕಾರ್ಯಾಚರಣೆ ಕುರಿತು ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದಾದರೂ ವಸ್ತುವನ್ನು ಮುಂದಿಟ್ಟು ಟ್ರ್ಯಾಪ್ ಮಾಡಬಹುದು. ಕನ್ನಡಕ, ಗಡಿಯಾರ ಅಥವಾ ಉಂಗುರದಲ್ಲಿಯೂ ಟ್ರ್ಯಾಪ್ ಮಾಡಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಪ್ರತಿದಿನ ನೂರಾರು ಜನರು ನಮ್ಮನ್ನು ಭೇಟಿಯಾಗುತ್ತಾರೆ. ಅವರಲ್ಲಿ ಯಾರು ಏನು ಉದ್ದೇಶ ಇಟ್ಟುಕೊಂಡು ಬರುತ್ತಾರೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಆದ್ದರಿಂದ ನಾವು ಎಚ್ಚರಿಕೆಯಿಂದ ಇರಬೇಕು ಅಷ್ಟೇ ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ ಅವರು, ನಾಲ್ಕು ಜಿಲ್ಲೆಗಳ ಶಾಸಕರು ಒಟ್ಟಾಗಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತಿದ್ದಾರೆ. ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮೋಹನ್ ಲಿಂಬಿಕಾಯಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯತ್ನಾಳ್ ಅವರು ಬಿಜೆಪಿಯವರೇ ಆಗಿದ್ದು, ಒಂದೇ ಪಕ್ಷದಲ್ಲಿದ್ದಾರೆ. ಇದರಲ್ಲಿ ವಿಶೇಷವೇನಿಲ್ಲ. ರಾಜಕೀಯದಲ್ಲಿ ಜಗಳಗಳಾಗುವುದು, ಚುನಾವಣೆ ಬಂದಾಗ ಮತ್ತೆ ಒಂದಾಗುವುದು ಸಹಜ. ಇದರಲ್ಲಿ ವಿಶೇಷವೇನಿದೆ ಎಂದು ಪ್ರಶ್ನಿಸಿದರು.
ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂಬ ಕೋಡಿಹಳ್ಳಿ ಚಂದ್ರಶೇಖರ್ ಅವರ ಹೇಳಿಕೆ ಕುರಿತು ಮಾತನಾಡಿದ ಅವರು, ನಾವು ಯಾರ ಪರವೂ ಇಲ್ಲ. ನ್ಯಾಯಸಮ್ಮತವಾದ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದೇವೆ. ಜಿಲ್ಲಾಡಳಿತವೂ ಪ್ರತಿಭಟನೆಗೆ ಅವಕಾಶ ಕಲ್ಪಿಸಿದೆ. ಇದೇ ಅ.26ರಂದು ಮುಖ್ಯಮಂತ್ರಿ ಬೆಳಗಾವಿಯಲ್ಲಿ ಸಭೆ ಕರೆದಿದ್ದಾರೆ. ಅಂದು ಕಬ್ಬು ಬೆಳೆಗಾರರು, ನಾವು ಸೇರಿದಂತೆ ಎಲ್ಲರೂ ಒಟ್ಟಾಗಿ ಸಭೆ ನಡೆಸುತ್ತೇವೆ. ರೈತರ ಪರವಾಗಿ ಕೆಲಸ ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.






