Hubballi | ಲೈಂಗಿಕ ದೌರ್ಜನ್ಯ ಆರೋಪ; ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಬಂಧನ: ಪೊಲೀಸ್ ಆಯುಕ್ತ ಶಶಿಕುಮಾರ್

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದ ಪ್ರತ್ಯೇಕ ಎರಡು ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುವತಿಯರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸುತ್ತಿದ್ದೇವೆ. ಮೊದಲ ಪ್ರಕರಣದಲ್ಲಿ ಸಮೀರ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಎರಡನೇ ಪ್ರಕರಣಕ್ಕೆ ಸಂಬಂಧಿಸಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ‘ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ’ ಎಂದು ಆರೋಪಿಸಿ ಮುಫೀಝ್ ಮಿಯಾನ್ನವರ ಎಂಬವನ ವಿರುದ್ಧ ಯುವತಿ ದೂರು ನೀಡಿದ್ದಾಳೆ. ಇದನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೆ, ಯುವತಿ ಆರೋಪದ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರವಿವಾರ ಸಮೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿತ್ತು. ನಂತರ ಬಂಧನ ಪ್ರಕ್ರಿಯೆ ಮಾಡಲಾಗಿದೆ. ಈ ಪ್ರಕರಣಗಳ ಹಿನ್ನೆಲೆಯಲ್ಲಿ ಜಿಮ್ ಮಾಲೀಕರ ಸಭೆ ಕರೆಯಲಾಗಿದೆ. ಜಿಮ್ ಮಾಲೀಕರ ಸಭೆಯಲ್ಲಿ ಸ್ಪಷ್ಟ ಮಾರ್ಗಸೂಚಿಯನ್ನು ತಿಳಿಸಲಾಗುವುದು. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಿಮ್ ಮಾಲೀಕರ ಮತ್ತು ತರಬೇತಿದಾರರ ಸಭೆ :
ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಜಿಮ್ ಮಾಲೀಕರ ಮತ್ತು ತರಬೇತಿದಾರರ ಸಭೆ ನಡೆಸಲಾಗಿದೆ. ಈ ವೇಳೆ ಪೊಲೀಸ್ ಆಯುಕ್ತರು, ʼಯಾವುದೇ ಅಚಾತುರ್ಯ ನಡೆಯದಂತೆ ತರಬೇತಿ ಕೊಡಬೇಕು. ಮಹಿಳೆಯರಿಂದಲೇ ಯುವತಿಯರಿಗೆ ಜಿಮ್ ತರಬೇತಿ ನೀಡಲು ಕ್ರಮ ಕೈಗೊಳ್ಳುವಂತೆʼ ಸೂಚನೆ ನೀಡಿದರು.







