2047ರ ವಿಕಸಿತ ಭಾರತ ನಿರ್ಮಾಣಕ್ಕೆ ಕಾರ್ಮಿಕರ ಕೊಡುಗೆ ಅಗತ್ಯ : ಶೋಭಾ ಕರಂದ್ಲಾಜೆ

ಹುಬ್ಬಳ್ಳಿ: ದೇಶದಲ್ಲಿ ಉದ್ಯೋಗದಾತರು ಹಾಗೂ ಉದ್ಯೋಗಿಗಳು ಪರಸ್ಪರ ಉತ್ತಮ ಸಂಬಂಧ ಹೊಂದಿರಬೇಕು. ಕೆಲಸ ಕೊಡುವವರು ಮತ್ತು ಕೆಲಸ ಮಾಡುವವರು ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. 2047ರೊಳಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡಲು ಕಾರ್ಮಿಕರು ಅಭೂತಪೂರ್ವ ಕೊಡುಗೆ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಗೋಕುಲ ರಸ್ತೆಯ ಹೆಬಸೂರ ಭವನದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ವತಿಯಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕಾರ್ಮಿಕರ ಚಿಂತನೆ ಬದಲಾಗಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಒಂದು ಕಾಲದಲ್ಲಿ ಕಾರ್ಮಿಕರಾಗಿದ್ದರು ಎಂದು ಉಲ್ಲೇಖಿಸಿದರು.
ಲೇಬರ್ ಕೋಡ್ ಜಾರಿಗೆ ಒತ್ತು :
ಬ್ರಿಟಿಷರ ಕಾಲದ ಕಾನೂನುಗಳು ಇನ್ನೂ ದೇಶದಲ್ಲಿವೆ. ಭಾರತೀಯರಿಗೆ ಭಾರತೀಯತೆ ಇರುವ ಕಾನೂನುಗಳು ಬೇಕು. ಅದಕ್ಕಾಗಿ ಹೊಸ ಲೇಬರ್ ಕೋಡ್ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಎಲ್ಲಾ ಕ್ಷೇತ್ರಗಳ ಕಾರ್ಮಿಕರಿಗೆ ESIC ಮತ್ತು ಪಿಂಚಣಿ ಸೌಲಭ್ಯ ಒದಗಿಸಬೇಕು ಎಂದು ತಿಳಿಸಿದರು.
ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ :
ದೇಶದ ಶೇ.90ರಷ್ಟು ಕಾರ್ಮಿಕರು ESIC ಹಾಗೂ EPF ಸೌಲಭ್ಯದಿಂದ ಹೊರಗಿದ್ದಾರೆ. ಅಸಂಘಟಿತ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿದೆ. ಇ-ಶ್ರಮ ಪೋರ್ಟಲ್‌ನಲ್ಲಿ 32 ಕೋಟಿಗೂ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ESIC ಉಚಿತ ಚಿಕಿತ್ಸೆ ಎಲ್ಲ ವರ್ಗಕ್ಕೂ ದೊರೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ವೆಚ್ಚ ಭರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಮುಂದಿನ ದಿನಗಳಲ್ಲಿ ಪಿಎಫ್ ಹಣವನ್ನು ಎಟಿಎಂ ಮೂಲಕ ಪಡೆಯುವ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದರು.
ಕಾರ್ಮಿಕರೇ ಆರ್ಥಿಕ ಬೆನ್ನೆಲುಬು :
ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ಎಲ್ಲಾ ಕಾರ್ಮಿಕರಿಗೆ ಸಮಾನ ವೇತನ ದೊರೆಯಬೇಕು. ಕೆಲಸದ ಅವಧಿ 8 ಗಂಟೆಗಳಷ್ಟೇ ಇರಬೇಕು. ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಕಾರ್ಮಿಕರೇ ಆಗಿದ್ದು, ಅವರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಹೇಳಿದರು.
ಕರ್ನಾಟಕ ಗೋವಾದ ಹೆಚ್ಚುವರಿ ಭವಿಷ್ಯ ನಿಧಿ ಆಯುಕ್ತರಾದ ಜಯಕುಮಾರ ಅವರು ವಿವಿಧ ಸೌಲಭ್ಯಗಳ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಇ ಎಸ್ ಐ ಮತ್ತು ಇಪಿಎಫ್ಒ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶಗಳನ್ನು ಗಣ್ಯರು ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಅಶುತೋಷ್ ತಿವಾರಿ, ಸಹಾಯಕ ಕಾರ್ಮಿಕ ಆಯುಕ್ತರಾದ ಎಂ. ರಾಮನಾಥನ್, ಎಸ್ಎಸ್ಒ ನಿರ್ಮಲಾ ಆರ್ ದಾವಣೆ, ಹುಬ್ಬಳ್ಳಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಜಿ. ಕೆ. ಆದಪ್ಪಗೌಡರ, ಮಾಜಿ ಮೇಯರ್ ವೀರಣ್ಣ ಸವಡಿ, ಮಹಾದೇವ ಕರಮರಿ, ಸಿದ್ದೇಶ್ವರ ಕಮ್ಮಾರ, ಉದಯ ರೇವಣಕರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಸಾರ್ವಜನಿಕರು ಇತರರು ಭಾಗವಹಿಸಿದ್ದರು.






