ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ: ಡಿ. 4ರಿಂದ ಚಿಕ್ಕೋಡಿಯಿಂದ ಪಾದಯಾತ್ರೆ
ಬೇಡಿಕೆ ಈಡೇರಿಸದಿದ್ದರೆ ಸುವರ್ಣ ಸೌಧದ ಎದುರು ಸತ್ಯಾಗ್ರಹ, ದೇಹತ್ಯಾಗ

ಹುಬ್ಬಳ್ಳಿ: ಜೈನ ಧರ್ಮದ ಯಾವುದೇ ಬೇಡಿಕೆ ಈಡೇರಿಸಲು ಸರಕಾರ ಮುಂದೆ ಬಂದಿಲ್ಲ. ಆದ್ದರಿಂದ ಡಿಸೆಂಬರ್ 4ರಂದು ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭಿಸಿ ಮೂರು ದಿನಗಳಲ್ಲಿ ಬೆಳಗಾವಿಗೆ ಪ್ರವೇಶ ಮಾಡುತ್ತೇನೆ. ಸರಕಾರ ಈ ಗಡುವಿನೊಳಗೆ ನಮ್ಮ ಬೇಡಿಕೆ ಈಡೇರಿಸಲು ಮುಂದಾಗದಿದ್ದರೆ ಸುವರ್ಣ ಸೌಧದ ಎದುರು ಸತ್ಯಾಗ್ರಹ ಮಾಡಿ, ದೇಹತ್ಯಾಗ ಮಾಡುತ್ತೇನೆ ಎಂದು ಜೈನ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.
ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೈನ ಅಭಿವೃದ್ಧಿ ನಿಗಮ ಮಂಡಳಿಗಾಗಿ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇನೆ. ಕರ್ನಾಟಕ ಮೂಲದ ಜೈನ ಸಮಾಜದವರು ತೀರಾ ಬಡವರಿದ್ದಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗದವರೂ ಇದ್ದಾರೆ. ಬಡ ಜೈನ ಸಮಾಜದವರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಜೈನ ಅಭಿವೃದ್ಧಿ ನಿಗಮಕ್ಕೆ ಈ ಹಿಂದೆ ಸರಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ತಿಳಿಸಿದರು.
ಸಚಿವ ಸಂತೋಷ ಲಾಡ್ ಅವರು ಮುಖ್ಯಮಂತ್ರಿಯವರಿಗೆ ವಿಷಯ ತಿಳಿಸುವುದಾಗಿ ಹೇಳಿದ್ದರು. ಸಚಿವ ಲಕ್ಷ್ಮಣ ಸವದಿ, ಸತೀಶ ಜಾರಕಿಹೊಳಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಮಾತನಾಡಿದ್ದಾರೆ. ಆದರೆ, ಇದುವರೆಗೆ ಸರಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳದಲ್ಲಿ ನ. 19ರಂದು ಸಮಾಜದ ಮುಖಂಡರ ಸಭೆ ನಡೆಸುತ್ತೇನೆ. ಕಾಗವಾಡ, ಅಥಣಿಯಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಗುತ್ತದೆ. ನಂತರ ಡಿ. 4ರಂದು ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭಿಸಿ ಮೂರು ದಿನಗಳಲ್ಲಿ ಬೆಳಗಾವಿಗೆ ಪ್ರವೇಶ ಮಾಡುತ್ತೇನೆ. ಸುವರ್ಣ ಸೌಧದ ಎದುರು ಸತ್ಯಾಗ್ರಹ ನಡೆಸಿ, ಬೇಡಿಕೆ ಈಡೇರಿಸಲು ಸರಕಾರ ಮುಂದಾಗದಿದ್ದರೆ ದೇಹತ್ಯಾಗ ಮಾಡುತ್ತೇನೆ ಎಂದು ಎಚ್ಚರಿಸಿದರು.
ಜೈನ ಸನ್ಯಾಸಿಗಳು ವಿಹಾರ ಮಾಡುವಾಗ ಸ್ಥಳೀಯ ಶಾಲೆಗಳಲ್ಲಿ ರಾತ್ರಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವಂತೆ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದ್ದೇನೆ. ಆದರೂ ಸ್ಪಂದನೆ ಮಾಡಿಲ್ಲ. ಶಿಕ್ಷಣ ಸಚಿವರು ಸನ್ಯಾಸಿಗೆ ಅವಮಾನ ಮಾಡಿದ್ದಾರೆ. ಸೌಜನ್ಯಕ್ಕೂ ಫೋನ್ ಮಾಡಿಲ್ಲ. ಅಂತಹ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಅವರ ವಿರುದ್ಧವೇ ಪ್ರತಿಭಟನೆ ಮಾಡಬೇಕಾಗುತ್ತದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸನ್ಯಾಸಿಗಳಿಗೆ ಸುರಕ್ಷತೆ ಕೊಡಬೇಕು ಎಂದು ಹೇಳಿದರು.






