Dharwad | ಲೋಕಾಯುಕ್ತ ದಾಳಿ; 50 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ತಹಶೀಲ್ದಾರ್

ಧಾರವಾಡ : 50 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಧಾರವಾಡ ತಹಶೀಲ್ದಾರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು ಮುಂಗಡವಾಗಿ 50 ಲಕ್ಷ ರೂ. ಪಡೆಯುವಾಗ ಬುಧವಾರ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.
ಬಾಗಲಕೋಟೆ ಜಿಲ್ಲೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವರ ಜಮೀನಿನ ‘ಬ’ ಖರಾಬು ಬದಲಾವಣೆ ಮಾಡಿಕೊಡಲು ತಹಶೀಲ್ದಾರ್ ಸಚ್ಚಿದಾನಂದ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಇದರೊಂದಿಗೆ ಒಂದು ಎಕರೆ ಜಮೀನನ್ನೂ ಕೇಳಿದ್ದರು ಎಂಬ ಆರೋಪ ಕೇಳಿಬಂದಿತ್ತು. ಮಂಜುನಾಥ ಅವರ ಜಮೀನು ಧಾರವಾಡ ತಾಲೂಕಿನಲ್ಲಿದೆ. ಈ ಜಮೀನಿನ ವಿಚಾರವಾಗಿ ಮಾಲೀಕ ಲೋಕಾಯುಕ್ತರಿಗೆ ದೂರು ದಾಖಲಿಸಿದ್ದರು.
ʼಹಣ ಪಡೆಯುವಾಗ ತಹಶೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರನ್ನು ಟ್ರ್ಯಾಪ್ ಮಾಡಿದ್ದೇವೆ. ನಿನ್ನೆ ಬೆಳಗ್ಗೆ(ಬುಧವಾರ) ದೂರು ಕೊಟ್ಟಿದ್ದರು. ರಾತ್ರಿ 9:30 ಗಂಟೆ ಸುಮಾರಿಗೆ ಲೋಕಾಯುಕ್ತ ದಾಳಿ ಆಗಿದೆ. ಕೆಸಿಡಿ ಹತ್ತಿರ ಬರಲು ಹೇಳಿ 50 ಲಕ್ಷ ರೂ. ಹಣ ಪಡೆಯುತ್ತಿದ್ದರು. ದೂರುದಾರರು ಅವರ ಬ್ಯಾಗ್ನಲ್ಲಿ ತಂದಿದ್ದ ಹಣ ತಹಶೀಲ್ದಾರ್ ತಮ್ಮ ಬ್ಯಾಗ್ಗೆ ಹಾಕಿಕೊಂಡಿದ್ದರು. ರಾಜ್ಯದಲ್ಲಿ ಇದು ದೊಡ್ಡ ರೇಡ್ ಆಗಿದೆʼ ಎಂದು ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ತಿಳಿಸಿದ್ದಾರೆ.




