Dharwad | ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರ ಟ್ರ್ಯಾಕ್ಟರ್ ರ‍್ಯಾಲಿ

ಧಾರವಾಡ : ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ಧಾರವಾಡದ ಜ್ಯುಬಿಲಿ ವೃತ್ತದವರೆಗೆ ಶನಿವಾರ ರೈತರ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿ ನಡೆಯಿತು.
ಶಿವಳ್ಳಿ ಗ್ರಾಮದ ದುರ್ಗಾದೇವಿ ದೇವಸ್ಥಾನದಿಂದ ಮಾಜಿ ಶಾಸಕ ಅಮೃತ ದೇಸಾಯಿ ಅವರು ರ‍್ಯಾಲಿಗೆ ಚಾಲನೆ ನೀಡಿ, ಸ್ವತಃ ತಾವೇ ಶಿವಳ್ಳಿಯಿಂದ ವಿವಿಧ ಮಾರ್ಗಗಳ ಮೂಲಕ ಹಾದು ಧಾರವಾಡ ತಲುಪುವವರೆಗೂ ಟ್ರ್ಯಾಕ್ಟರ್ ಚಲಾಯಿಸಿದ್ದರು. ನೂರಾರು ಟ್ರ್ಯಾಕ್ಟರ್‌ಗಳು ಈ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದವು.
ಶಿವಳ್ಳಿಯಿಂದ ಹೆಬ್ಬಳ್ಳಿ, ಕನಕೂರು, ತಲವಾಯಿ, ಕವಲಗೇರಿ, ಅಮ್ಮಿನಬಾವಿ ಮೂಲಕ ಹಾದು ಧಾರವಾಡದ ತಲುಪಿತು. ಮುರುಘಾಮಠಕ್ಕೆ ರ‍್ಯಾಲಿ ಬಂದು ತಲುಪಿದ ನಂತರ ಅಲ್ಲಿಂದ ಮಾಜಿ ಶಾಸಕ ಅಮೃತ ದೇಸಾಯಿ ಅವರು ಜ್ಯುಬಿಲಿ ವೃತ್ತದವರೆಗೂ ರೈತರೊಂದಿಗೆ ಪಾದಯಾತ್ರೆ ನಡೆಸಿದರು.
ರಾಜ್ಯ ಸರಕಾರ ಪ್ರತಿ ಎಕರೆಗೆ 50 ಸಾವಿರ ಬರ ಪರಿಹಾರ ನೀಡಬೇಕು, ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು, ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ಮೇವಿನ ಕೊರತೆ ಇರುವ ರೈತರ ದನ, ಕರುಗಳಿಗೆ ಉಚಿತ ಮೇವಿನ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿ ಜ್ಯುಬಿಲಿ ವೃತ್ತದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾಜಿ ಶಾಸಕ ಅಮೃತ ದೇಸಾಯಿ, ಬಿಜೆಪಿ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ, ಮಾಜಿ ಮೇಯರ್ ಈರೇಶ ಅಂಚಟಗೇರಿ, ಶಂಕರ ಕೋಮಾರ ದೇಸಾಯಿ ಇದ್ದರು.
ನೂರಾರು ಟ್ರ್ಯಾಕ್ಟರ್‌ಗಳು ಧಾರವಾಡ ಪ್ರವೇಶ ಮಾಡುತ್ತಿದ್ದಂತೆ ಸಹಜವಾಗಿಯೇ ನಗರದಲ್ಲಿ ವಾಹನ ದಟ್ಟನೆ ಉಂಟಾಗಿತ್ತು. ಜ್ಯುಬಿಲಿ ವೃತ್ತವನ್ನು ಬಂದ್ ಮಾಡಿದ್ದರಿಂದ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಯಿತು. ಪ್ರತಿಭಟನೆ ಹಿನ್ನೆಲೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಿದ್ದರು.






