ಧಾರವಾಡ | ಯುವತಿಯ ಮೃತದೇಹ ಪತ್ತೆ ಪ್ರಕರಣ: ಮದುವೆಯಾಗಬೇಕಿದ್ದ ಯುವಕನಿಂದಲೇ ಕೊಲೆ

ಸಾಬೀರ್ ಮುಲ್ಲಾ / ಝಕಿಯಾ ಮುಲ್ಲಾ
ಧಾರವಾಡ: ಧಾರವಾಡದ ಹೊರವಲಯದಲ್ಲಿ ಯುವತಿಯ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸಿದ್ದಾರೆ.
ಪ್ಯಾರಾ ಮೆಡಿಕಲ್ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಯುವತಿ ಝಕಿಯಾ ಮುಲ್ಲಾ ಬುಧವಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಮದುವೆಯಾಗಬೇಕಿದ್ದ ಸಾಬೀರ್ ಮುಲ್ಲಾ ಎಂಬಾತನೇ ಕೊಲೆ ಮಾಡಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ಸಾಬೀರ್ ಹಾಗೂ ಝಕಿಯಾ ಒಂದೇ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಮಾಡುತ್ತಿದ್ದರಿಂದ ಹತ್ತಿರವಾಗಿದ್ದರೆನ್ನಲಾಗಿದೆ. ಬಳಿಕ ಮನೆಯ ಹಿರಿಯರ ಸಮ್ಮುಖದಲ್ಲಿ ಇವರಿಬ್ಬರ ಮದುವೆ ಮಾತುಕತೆ ನಡೆದಿತ್ತು. ಅಲ್ಲದೆ, ಮುಂದಿನ ತಿಂಗಳು ಇವರಿಬ್ಬರ ನಿಶ್ಚಿತಾರ್ಥ ಸಮಾರಂಭಕ್ಕೆ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು.
ಈ ನಡುವೆ ಸಾಬೀರ್ ಇತರ ಹುಡುಗಿಯರ ಜೊತೆ ಸಲುಗೆ ಹೊಂದಿದ್ದಾನೆ ಎಂದು ಝಕಿಯಾ ತರಾಟೆಗೆ ತೆಗೆದುಕೊಂಡಿದ್ದಳು. ಇದೆಲ್ಲದರ ಪರಿಣಾಮ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಬಳಿಕ ಸಾಬೀರ್ ಝಕಿಯಾಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕುತ್ತಿಗೆ ಹಿಸುಕಿ ಕೊಲೆಗೈದಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಪೊಲೀಸರಿಗೇ ಮಾಹಿತಿ ನೀಡಿದ್ದ ಆರೋಪಿ!
ಈ ಪ್ರಕರಣದಲ್ಲಿ ಆರೋಪಿ ಸಾಬೀರ್, ಕೊಲೆ ಮಾಡಿದ ಬಳಿಕ ಝಕಿಯಾ ನಾಪತ್ತೆಯಾಗಿದ್ದಾಳೆ, ಆಕೆಯನ್ನು ಹುಡುಕಿಕೊಡಿ ಎಂದು ಧಾರವಾಡ ಶಹರ ಠಾಣೆಗೆ ಹೋಗಿ ಹುಡುಕಿಕೊಡುವಂತೆ ಮನವಿ ಮಾಡಿದ್ದ. ಅಲ್ಲದೆ, ತಾನೇ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದನು. ಆ ನಂತರ ಘಟನಾ ಸ್ಥಳಕ್ಕೆ ಪೊಲೀಸರು ಬಂದಾಗಲೂ ಅಲ್ಲೇ ಇದ್ದು ಏನೂ ಅರಿಯದವನಂತೆ ನಟಿಸಿದ್ದನು. ಆದರೆ, ಆತನ ನಡವಳಿಕೆಯ ಮೇಲೆ ಅನುಮಾನಗೊಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೇ ಕೊಲೆ ಮಾಡಿರುವ ಸತ್ಯ ಹೊರ ಬಂದಿದೆ.
ಸಾಬೀರ್ ಮುಲ್ಲಾ ಮತ್ತು ಝಕಿಯಾ ಒಂದೇ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಮಾಡುತ್ತಿದ್ದರಿಂದ ಕಳೆದ ಮೂರು ವರ್ಷಗಳಿಂದ ಪರಿಚಯವಿದ್ದು, ಇಬ್ಬರ ನಡುವೆ ಮದುವೆ ವಿಷಯದಲ್ಲಿ ಸ್ವಲ್ಪ ಮನಸ್ತಾಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಜ.20ರಂದು ಝಕಿಯಾಳನ್ನು ಸಾಬೀರ್ ಕೊಲೆ ಮಾಡಿದ್ದು, ಪ್ರಕರಣದ ತಾಂತ್ರಿಕ ತನಿಖೆಯ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ. ಕೃತ್ಯದ ಹಿಂದೆ ಬೇರೆ ಯಾರಾದರೂ ಶಾಮೀಲಾಗಿದ್ದಾರಾ ಎಂಬುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಗುಂಜನ್ ಆರ್ಯ, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ







