Dharwad | ʼಅಕ್ಕ ಪಡೆʼಗೆ ಸಚಿವ ಸಂತೋಷ್ ಲಾಡ್ ಚಾಲನೆ

ಧಾರವಾಡ : ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಚಾಲಿತವಾಗಿರುವ ಅಕ್ಕ ಪಡೆ ಸಮಾಜದಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಸೃಜನಾ ರಂಗಮಂದಿರ ಮುಂಭಾಗದಲ್ಲಿ ಅಕ್ಕ ಪಡೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ತುರ್ತಾಗಿ ಸ್ಪಂದಿಸಲು ಅನುಕೂಲವಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕರ್ನಾಟಕ ರಾಜ್ಯ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕ ಪಡೆಯನ್ನು ರಚಿಸಿದೆ. ಮಹಿಳೆಯರೇ ಆರಕ್ಷಕರಿರುವ ಅಕ್ಕ ಪಡೆಯನ್ನು ಆರಂಭಿಸಿದೆ. ಅದರಂತೆ ಧಾರವಾಡ ಜಿಲ್ಲೆಯಲ್ಲೂ ಅಕ್ಕ ಪಡೆಗೆ ಚಾಲನೆ ನೀಡಲಾಗಿದೆ ಎಂದರು.
ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕ ಸಹಾಯ ಹಸ್ತ ಮತ್ತು ರಕ್ಷಣೆ ಒದಗಿಸುವುದು ಅಕ್ಕ ಪಡೆಯ ಉದ್ದೇಶವಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ, ಘನತೆ ಮತ್ತು ಸಬಲೀಕರಣವನ್ನು ಉತ್ತೇಜಿಸುವುದಾಗಿದೆ. ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳು ಮತ್ತು ಲಭ್ಯವಿರುವ ಬೆಂಬಲ ವ್ಯವಸ್ಥೆಗಳ ಬಗ್ಗೆ, ಜಾಗೃತಿ ಮೂಡಿಸುವುದು ಮತ್ತು ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆದು, ಕಾನೂನಿನ ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದು ಅಕ್ಕ ಪಡೆಯ ಗುರಿಯಾಗಿದೆ ಎಂದು ಸಂತೋಷ್ ಲಾಡ್ ಹೇಳಿದರು.
ತರಬೇತಿ ಪಡೆದ ಅಕ್ಕ ಪಡೆ ತಂಡಗಳು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗಾಟ ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತವೆ. ಲಿಂಗ ಸಮಾನತೆ, ಮಕ್ಕಳ ರಕ್ಷಣೆ, ಕಾನೂನು ಹಕ್ಕುಗಳು, ಸಹಾಯವಾಣಿಗಳು ಮತ್ತು ವರದಿ ಮಾಡುವ ಕಾರ್ಯವಿಧಾನಗಳಂತಹ ವಿಷಯಗಳ ಕುರಿತು ಶಾಲೆ, ಕಾಲೇಜು, ಮಾರುಕಟ್ಟೆ ಮತ್ತು ನೆರೆಹೊರಗಳಲ್ಲಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತದೆ ಎಂದು ಸಂತೋಷ್ ಲಾಡ್ ತಿಳಿಸಿದರು.
ಅಕ್ಕ ಪಡೆಯು, ಮಕ್ಕಳ ಕಲ್ಯಾಣ ಸಮಿತಿಗಳು, ಮಹಿಳಾ ಸಹಾಯವಾಣಿಗಳು, ಸರಕಾರೇತರ ಸಂಸ್ಥೆಗಳು, ಕಾನೂನು ನೆರವು ಮತ್ತು ಆಶ್ರಯ ತಾಣಗಳೊಂದಿಗೆ ಸುಗಮ ಸಂಪರ್ಕ ಕಲ್ಪಿಸಿ ಸಮಾಲೋಚನೆ ಬೆಂಬಲವನ್ನು ನೀಡುತ್ತದೆ. ವಿಶ್ವಾಸ ವರ್ಧನೆ, ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹ ಸ್ಥಿತಿಯನ್ನು ಸ್ಥಾಪಿಸುವುದು, ಸಂತ್ರಸ್ತೆಯರು ಮತ್ತು ಕುಟುಂಬಗಳು ಭಯವಿಲ್ಲದೆ ಸಹಾಯ ಪಡೆಯಲು ಪ್ರೋತ್ಸಾಹಿಸುತ್ತದೆ ಎಂದು ಸಂತೋಷ್ ಲಾಡ್ ಹೇಳಿದರು.
ಜಿಲ್ಲಾ ಮಟ್ಟದಲ್ಲಿ ಮಹಿಳಾ ಗೃಹ ರಕ್ಷಕರನ್ನೊಳಗೊಂಡ ಅಕ್ಕ ಪಡೆ ತಂಡವು ಸ್ಥಳೀಯ ಪೊಲೀಸರ ನಿಕಟ ಸಹಯೋಗದೊಂದಿಗೆ ಬೆಳಗ್ಗೆ 7ರಿಂದ ರಾತ್ರಿ 8 ಗಂಟೆಯವರೆಗೆ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತದೆ. ತಂಡದ ಸದಸ್ಯರನ್ನು ಶಾಲೆ, ಕಾಲೇಜು, ಬಾಲಕಿಯರ, ಮಹಿಳಾ ಹಾಸ್ಟೆಲ್, ಬಸ್, ರೈಲ್ವೆ ನಿಲ್ದಾಣಗಳು, ಸ್ಥಳೀಯ ಮಾರುಕಟ್ಟೆ, ಪ್ರೇಕ್ಷಣಿಯ ಸ್ಥಳಗಳು ಪವಿತ್ರ ಸ್ಥಳಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ನಿಯೋಜಿಸಲಾಗಿರುತ್ತದೆ ಎಂದು ಸಂತೋಷ್ ಲಾಡ್ ತಿಳಿಸಿದರು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.







