Dharwad | ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲರ ಮನೆ ಮಾತಾಗಿದೆ : ಡಾ.ಸಂಜೀವ್ ಕುಲಕರ್ಣಿ

ಧಾರವಾಡ : ಪ್ರಾಚೀನ ಕಾಲದಲ್ಲಿ ಮಾತಿನ ಮೂಲಕ ವಚನವನ್ನು ಪೂರೈಸುವ ಮೌಲ್ಯಯುತ ಪದ್ಧತಿ ಇತ್ತು. ಅಕ್ಷರ, ಬರವಣಿಗೆ ಬಂದ ಮೇಲೆ ಮಾತಿಗೆ ಇದ್ದಂತಹ ಮಹತ್ವ ಕ್ರಮೇಣ ಕಡಿಮೆಯಾಗುತ್ತ ಬಂತು. ಆದರೆ ಸಾಮಾಜಿಕ ಬದುಕನ್ನು ನಿರ್ಧರಿಸುವ ವಿಜ್ಞಾನ ಮತ್ತು ತಂತ್ರಜ್ಞಾನ ಅಗಾಧವಾಗಿ ಬೆಳೆದು ಎಲ್ಲರ ಮನೆ ಮಾತಾಗಿದೆ ಎಂದು ಡಾ.ಸಂಜೀವ್ ಕುಲಕರ್ಣಿ ಹೇಳಿದರು.
ಸೋಮವಾರ ನಗರದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಸುದರ್ಶನರಾಜ ಫೌಂಡೇಶನ್ ದತ್ತಿ ಅಂಗವಾಗಿ ಆಯೋಜಿಸಿದ್ದ `ಸಾಮಾಜಿಕ ಜಾಲತಾಣಗಳು ಮತ್ತು ವ್ಯಕ್ತಿ ಗೌರವ’ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಕಂಪ್ಯೂಟರ್ ಟ್ಯಾಬ್, ಮೊಬೈಲ್ ಇತ್ಯಾದಿ ತಾಂತ್ರಿಕ ವ್ಯವಸ್ಥೆ ಬಂದ ಮೇಲೆ ಅಭಿಪ್ರಾಯ, ಮಾಹಿತಿ, ಭಾವಚಿತ್ರ, ಅಡಿಯೋ, ವಿಡಿಯೋ ಹಂಚಿಕೊಳ್ಳಲು ಸುಲಭ ಸಾಧ್ಯವಾಗಿದೆ. ಫೇಸ್‍ಬುಕ್, ವಾಟ್ಸಪ್, ಇನ್ಸ್ಟ್ರಾಗ್ರಾಮ್ ಬಳಕೆ, ಉಪಯೋಗ ಹೆಚ್ಚಾಗಿದೆ ಎಂದು ತಿಳಿಸಿದರು.
ಒಬ್ಬ ವ್ಯಕ್ತಿ ಗೌರವದ ಬಗ್ಗೆ ಅಸತ್ಯವಾಗಿ ಇಲ್ಲಸಲ್ಲದ ಮಾತುಗಳನ್ನು ಹಂಚಿಕೊಳ್ಳುವುದು, ವ್ಯಂಗ್ಯ, ಅಪಹಾಸ್ಯ, ಲಿಂಗತಾರತಮ್ಯ, ವರ್ಣಬೇಧ ಹಾಗೂ ಭಾಷಣಕ್ಕೆ ಸಂಬಂಧಿಸಿದಂತೆ ವಾಸ್ತವಿಕತೆಯನ್ನು ಮರೆಮಾಚಿ, ತಮಗೆ ಬೇಕಾದ ರೀತಿಯಲ್ಲಿ ತಿರುಚುವುದು ಅವಹೇಳನಕಾರಿ ಹೇಳಿಕೆ ನೀಡುವುದು, ಅದನ್ನು ಆಲೋಚನೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಮಾಜದ ಸ್ವಾಸ್ಥ್ಯ ಕದಡುವುದು, ಹೀಗೆ ಆಧುನಿಕ ತಂತ್ರಜ್ಞಾನದ ದುರ್ಬಳಕೆ ಹೆಚ್ಚಾಗುತ್ತಿದೆ. ಈ ದಿಶೆಯಲ್ಲಿ ಸರಕಾರವು ಗಂಭೀರವಾಗಿ ತಜ್ಞರ ಜೊತೆ ಸಮಾಲೋಚಿಸಿ ನಿಯಂತ್ರಿಸಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.
ದತ್ತಿದಾನಿ ಹಾಗೂ ಸುಪ್ರೀಂಕೋರ್ಟ್ ವಕೀಲ ಸಿ.ಎಂ.ಅಂಗಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಇತಿಮಿತಿಗೊಳಪಟ್ಟು ಒಳ್ಳೆಯ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಧಾರವಾಡ ಕೆ.ಇ.ಬೋಡ್ರ್ಸ್ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದೇಶಗಳಿಗೆ ಹೋಲಿಕೆ ಮಾಡಿದರೆ ನಾವು ತಂತ್ರಜ್ಞಾನದಲ್ಲಿ ಹಿಂದಿದ್ದೇವೆ. ಸಾಮಾಜಿಕ ಜಾಲತಾಣಗಳು ಉಪಯೋಗದ ಜೊತೆ ದುರುಪಯೋಗವೂ ಆಗುತ್ತಿದೆ. ಇದಕ್ಕೆ ಇತ್ತೀಚಿನ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿಯ ವಿದ್ಯಮಾನಗಳೇ ಸಾಕ್ಷಿ ಎಂದರು.
ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿನಿ ಪ್ರೀತಿ ಸಿ.ಅಂಗಡಿ ಅವರಿಗೆ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ವಕೀಲರು ಮತ್ತು ಸಾಹಿತಿ ಎಂ.ಸುದರ್ಶನರಾಜ ವೇದಿಕೆಯಲ್ಲಿದ್ದರು. ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣಒಡ್ಡೀನ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಸತೀಶತುರಮರಿ ಹಾಗೂ ಪ್ರೊ.ಎಸ್.ಎಂ.ಕುಂದರಗಿ, ಎಂ.ಎಂ. ಚಿಕ್ಕಮಠ, ಶ್ರೀಧರ ಗಸ್ತಿ, ರಾಜೇಂದ್ರ ಸಾವಳಗಿ, ಚಂದ್ರಶೇಖರ ಅಮಿನಗಡ, ಭೀಮಪ್ಪಜಾಧವ ಸೇರಿದಂತೆ ಎಂ. ಸುದರ್ಶನರಾಜ್ ಪರಿವಾರದವರು ಮತ್ತಿತರರು ಭಾಗವಹಿಸಿದ್ದರು.






