ಧಾರವಾಡ | ಕಬ್ಬು ಬೆಳೆಗಾರರ ಧರಣಿ: ವಾಹನ ಸಂಚಾರ ಅಸ್ತವ್ಯಸ್ತ

ಧಾರವಾಡ: ಕಬ್ಬಿಗೆ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರು ಇಂದು ಬೆಳಿಗ್ಗೆಯಿಂದ ಧಾರವಾಡ ಬಳಿಯ ಯರಿಕೊಪ್ಪ ಕ್ರಾಸ್ ಬಳಿ ಬೈಪಾಸ್ ರಸ್ತೆ ತಡೆದು ಧರಣಿ ನಡೆಸಿದರು.
ಬೆಳಗ್ಗೆ 11 ಗಂಟೆಯಿಂದಲೇ ಬೈಪಾಸ್ ರಸ್ತೆಯಲ್ಲಿ ಜಮಾಯಿಸಿದ 100ಕ್ಕೂ ಹೆಚ್ಚು ರೈತರು ರಸ್ತೆ ತಡೆ ನಡೆಸಿ, ಸರ್ಕಾರದ ವಿರುದ್ಧ ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಬ್ಬಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಶಂಕರ್ ಬೊಬಾಟೆ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜೋಶಿ ಸುಮಾರು ಐದು ಲಕ್ಷ ರೈತರಿಗೆ ಅವಮಾನ ಮಾಡಿದರು. ಅಲ್ಲದೆ, ನಾವು ನಿರಾಕರಿಸಿದರೂ ನಮ್ಮನ್ನು ದಿಲ್ಲಿಗೆ ಕರೆಯಿಸಿ ರೈತ-ರೈತರ ಮಧ್ಯೆ ವೈಮನಸ್ಸು ಉಂಟು ಮಾಡಿ ಅಪಮಾನ ಮಾಡಿದ್ದಾರೆ. ಅನ್ನ ಬೆಳೆಯುವ ರೈತ ಬೀದಿಗಿಳುವಂತೆ ಮಾಡುತ್ತಿರುವುದು ಎಂತಹ ನ್ಯಾಯ. ಎಂಎಸ್ಪಿ 60 ಮತ್ತು ಕಬ್ಬಿನ ಬೆಂಬಲ ಬೆಲೆ 5500 ನೀಡುವವರೆಗೂ ಈ ಹೋರಾಟ ಹಿಂದೆ ಪಡೆಯುವುದಿಲ್ಲ ಎಂದು ರೈತರು ಎಚ್ಚರಿಸಿದರು.
ರೈತರ ಆಕ್ರೋಶ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ:
ಪ್ರತಿಭಟನೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಪ್ರತಿಭಟನೆ ಮುಗಿಯುವವರೆಗೆ ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸ್ ಇಲಾಖೆ ಸೂಚಿಸಿದೆ.
- *ನರೇಂದ್ರ ಬೈಪಾಸ್ ಕಡೆಯಿಂದ ಹುಬ್ಬಳ್ಳಿಗೆ ಬರುವ ವಾಹನಗಳು: ಅಗ್ರಿಕಲ್ಚರ್ ಯುನಿವರ್ಸಿಟಿ - ಹೊಸ ಬಸ್ ನಿಲ್ದಾಣ - ಹಳೇ ಎಸ್.ಪಿ ಕಚೇರಿ ಸರ್ಕಲ್ - ಜುಬ್ಬಿ ಸರ್ಕಲ್ ಮಾರ್ಗವಾಗಿ ಸಂಚರಿಸುತ್ತಿದ್ದವು.
- ಬೆಳಗಾವಿ ಕಡೆಯಿಂದ ಸವದತ್ತಿ, ನವಲಗುಂದ, ವಿಜಾಪುರಕ್ಕೆ ಹೋಗುವ ವಾಹನಗಳು: ಹಳೇ ಎಸ್.ಪಿ ಕಚೇರಿ ಸರ್ಕಲ್ - ಮರಾಠಾ ಕಾಲನಿ ಮಾರ್ಗವಾಗಿ ಸಂಚಾರ.
- *ಧಾರವಾಡದಿಂದ ಕಾರವಾರ ಮತ್ತು ಬೆಂಗಳೂರಿಗೆ ತೆರಳುವ ಲಘು ವಾಹನಗಳು: ಹುಸೂರು - ವಾಣಿ ವಿಲಾಸ - ಎಂ.ಟಿ ಮಿಲ್ - ಇಂದಿ ಪಂಪ್ ಸರ್ಕಲ್ ಮೂಲಕ ಸಂಚಾರ.
- ಭಾರಿ ವಾಹನಗಳು: ಗೋಕುಲ ರಸ್ತೆ - ತಾರಿಹಾಳ ಅಂಡರ್ ಬ್ರಿಡ್ಜ್ ಮೂಲಕ ಸಂಚರಿಸುತ್ತಿವೆ.
ಕೇಂದ್ರ ಸಚಿವ ಜೋಶಿ ಕಚೇರಿಗೆ ಬಿಗಿ ಬಂದೋಬಸ್ತ್
ದಿಲ್ಲಿಯಲ್ಲಿ ಕಬ್ಬು ಬೆಳೆಗಾರರ ಸಭೆ ವಿಫಲವಾದ ಹಿನ್ನೆಲೆಯಲ್ಲಿ, ರೈತ ಸಂಘ ಇಂದು ಹೋರಾಟಕ್ಕೆ ಮತ್ತೆ ಕರೆ ಕೊಟ್ಟಿದ್ದರಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಕಚೇರಿ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.






