Dharwad | ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತ್ಯು

ಧಾರವಾಡ : ಕೆರೆಗೆ ಈಜಲು ಹೋಗಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಸಿಂಗನಳ್ಳಿ ಗ್ರಾಮದ ಸಮೀಪದ ಕರೆಮ್ಮನಕೆರೆಯಲ್ಲಿ ನಡೆದಿದೆ.
ಸಿಂಗನಳ್ಳಿ ಗ್ರಾಮದ ನಿವಾಸಿಗಳಾದ ಅನ್ವರ ಇಬ್ರಾಹಿಂ ವಟ್ನಾಳ (13), ಸುಭಾನಿ ಇಸಾಕ ಬಾಗಜಿಕೊಪ್ಪ (12) ಹಾಗೂ ಮೆಹಬೂಬಸುಭಾನಿ ದಾದಾಫೀರ ವಟ್ನಾಳ (15) ಮೃತ ಬಾಲಕರಾಗಿದ್ದಾರೆ.
ಬೇಸಿಗೆಯ ತಾಪ ಹೆಚ್ಚಾಗಿದ್ದರಿಂದ ಮೂವರೂ ಬಾಲಕರು ಇಂದು ಮಧ್ಯಾಹ್ನದ ವೇಳೆ ಈಜಾಡಲು ಕೆರೆಗೆ ತೆರಳಿದ್ದರು. ನೀರಿನ ಆಳ ತಿಳಿಯದೇ ಕೆರೆಯ ಆಳಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಒಬ್ಬರನ್ನೊಬ್ಬರು ರಕ್ಷಿಸಲು ಹೋಗಿ ಮೂವರೂ ನೀರಿನಲ್ಲಿ ಮುಳುಗಿದ್ದಾರೆ. ಮನೆ ಬಿಟ್ಟು ಹೋರಗಡೆ ಹೋಗಿದ್ದ ಬಾಲಕರು ಮನೆಯ ಆಸುಪಾಸು ಕಾಣದೆ ಇದ್ದಾಗ ಪಾಲಕರು ಹುಡಕಾಡಿದಾಗ ಕಾಣದೆ ಇದ್ದಾಗ ಆತಂಕಗೊಂಡ ಪೋಷಕರು ಊರ ಸುತ್ತಮುತ್ತ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ, ಡಿವೈಎಸ್ಪಿ ವಿನೋದ ಮುಕ್ತೆದಾರ, ಇನ್ಸಪೆಕ್ಟರ್ ಶಿವಯೋಗಿ ಲೋಹಾರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಗರಗ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರ ನೆರವಿನಿಂದ ಮೃತದೇಹವನ್ನು ಹೊರತೆಗೆಯಲಾಗಿದೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




