ಕಾಂಗ್ರೆಸ್ ನಲ್ಲಿ 140 ಶಾಸಕರು ಇರುವುದರಿಂದ ಅಸಮಾಧಾನ ಸಹಜ : ಸಚಿವ ಸಂತೋಷ್ ಲಾಡ್

ಸಂತೋಷ್ ಲಾಡ್
ಹುಬ್ಬಳ್ಳಿ : ಕಾಂಗ್ರೆಸ್ ನಲ್ಲಿ 140 ಶಾಸಕರು ಇರುವುದರಿಂದ ಅಸಮಾಧಾನ ಉಂಟಾಗುವುದು ಸಹಜ ಆದರೆ ಅವರ ಅಸಮಾಧಾನ ಪಕ್ಷದ ವಿರುದ್ಧವಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಅವರ ಅಸಮಾಧಾನ ಬಗೆಹರಿಸುವ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ವಿಶ್ವಗುರು ಎಂದು ಬರೀ ಹೇಳಿಕೊಂಡು ತಿರುಗಿದರೆ ಸಾಲದು, ಪೆಹಲ್ಗಾಮ್ ಘಟನೆ ನಡೆದಾಗ ನಾಲ್ಕೈದು ಜನ ಉಗ್ರರ ಫೋಟೋ ತೋರಿಸಿದರು. ಆದರೆ ಆ ಉಗ್ರಗಾಮಿಗಳು ಕಥೆ ಏನಾಯ್ತು? ಪೆಹಲ್ಗಾಮ್ ಘಟನೆ ಬಗ್ಗೆ ಕೇಳಬಾರದಾ ಎಂದು ಪ್ರಶ್ನಿಸಿದರು.
ದೇಶದ ವಿಚಾರದಲ್ಲಿ ಪ್ರಶ್ನೆ ಕೇಳೋ ಅಧಿಕಾರ ನಮಗಿದೆ, ನಾವು ಕೇಳುತ್ತೇವೆ. ಬಿಜೆಪಿಯ ವಿದೇಶಾಂಗ ನೀತಿ ಫೇಲ್ ಆಗಿದೆ. ವೈಯಕ್ತಿಕ ತಲಾ ಆದಾಯ ಬಗ್ಗೆ ಬಿಜೆಪಿಯವರು ಮಾತಾಡಲ್ಲಾ ಎಂದು ಹೇಳಿದರು.
ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿಲ್ಲಾ ಎಂದು ಬಿಜೆಪಿ ಸರಕಾರವೇ ಹೇಳಿದೆ. ಯುಪಿಎ ಸರಕಾರದಲ್ಲಿ ಯಾವುದೇ ಹಗರಣ ಆಗಿಲ್ಲಾ ಎಂದು ಇದೇ ಬಿಜೆಪಿ ಸರಕಾರದ ರಿಪೋರ್ಟ್ ವರದಿ ಹೇಳಿದೆ ಎಂದು ತಿಳಿಸಿದರು.
ವೈಯಕ್ತಿಕವಾಗಿ ಮೋದಿ ಅವರನ್ನೂ ನಾವು ಬೈದಿಲ್ಲ, ಹಗುರವಾಗಿ ಮಾತನಾಡಿಲ್ಲ. ಪ್ರಧಾನಿ ಬದಲಾವಣೆ ಮಾಡಬೇಕು ಎಂದು ಬಿಜೆಪಿಯವರು ಕೇಳುತ್ತಿದ್ದಾರೆ ಎಂಬ ಮಾಹಿತಿ ನನಗೆ ದೊರೆತಿದೆ. ಇದರ ಬಗ್ಗೆ ಬಿಜೆಪಿ ಅವರು ಚರ್ಚೆ ಮಾಡಲಿ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.







