ಹುಬ್ಬಳ್ಳಿಯಲ್ಲಿ ಪಾಲಿಕೆ ವಿರುದ್ಧ ರೈತರಿಂದ ಧರಣಿ

ಹುಬ್ಬಳ್ಳಿ : ಮಹದಾಯಿ-ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆ ಕುರಿತು ಚರ್ಚಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲ ಸದಸ್ಯರ ವಿಶೇಷ ಸಭೆ ಕರೆಯುವಂತೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ಹು-ಧಾ ಮಹಾನಗರ ಪಾಲಿಕೆ ಆವರಣದಲ್ಲಿ ಧರಣಿ ನಡೆಸಿತು.
ಮೂರುಸಾವಿರಮಠದಿಂದ ನೂರಾರು ರೈತರು ಚೆನ್ನಮ್ಮ ವೃತ್ತದ ಮಾರ್ಗವಾಗಿ ಪಾಲಿಕೆ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ರಾಜ್ಯ ಹಾಗೂ ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಕ್ಕೆ ಸ್ಪಂದಿಸದ ಪಾಲಿಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಕುರಿತು ರೈತ ಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, 2015ರ ಜು.16ರಿಂದ ಮಹದಾಯಿ ಯೋಜನೆ ಜಾರಿಗಾಗಿ ನಿರಂತರ ಹೋರಾಟ ನಡೆಸುತ್ತ ಬರಲಾಗಿದೆ. ಈಗಾಗಲೇ ಪಾಲಿಕೆ ಆಯುಕ್ತರಿಗೆ ಸೆ.21 ಹಾಗೂ ಅ.9ರಂದು ಮನವಿ ಸಲ್ಲಿಸಿ ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಲಾಗಿದೆ. ಆದರೆ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಮಹಾನಗರಕ್ಕೆ ಯಾವ ವರ್ಷದಿಂದ ನೀರು ಪೂರೈಕೆಯಾಗುತ್ತಿದೆ, ಕೈಗಾರಿಕೆಗಳಿಗೆ ನೀರು ನೀಡುತ್ತಿರುವ ವ್ಯವಸ್ಥೆ ಹಾಗೂ ಈ ವರೆಗೆ ಸಂಗ್ರಹಿಸಿರುವ ತೆರಿಗೆ ವಿವರ ಸೇರಿದಂತೆ ಯೋಜನೆಯ ಸಾಧಕ-ಬಾಧಕಗಳ ಕುರಿತು ಸಭೆಯಲ್ಲಿ ಚರ್ಚೆಯಾಗಬೇಕು. ರೈತರ ಹಿತದೃಷ್ಟಿಯಿಂದ ಶೀಘ್ರ ಸಭೆ ಕರೆಯಬೇಕು. ಅಲ್ಲಿಯವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಹೇಳಿದರು.
ಈ ವೇಳೆ ಪಾಲಿಕೆ ಮೇಯರ್ ಮತ್ತು ಆಯುಕ್ತರು ಧರಣಿ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಸ್ವೀಕರಿಸಿ ನ.18ರಂದು ಪಾಲಿಕೆಯ ಸದಸ್ಯರ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು. ಬಳಿಕ ರೈತರು ತಮ್ಮ ಧರಣಿ ಹಿಂಪಡೆದರು.






