ಗಣೇಶೋತ್ಸವ | ಹುಬ್ಬಳ್ಳಿ-ಧಾರವಾಡದಲ್ಲಿ ಬಿಗಿ ಪೊಲೀಸ್ ಭದ್ರತೆ

ಭೂಷಣ್ ಗುಲಾಬ್ ರಾವ್ ಬೊರಸೆ
ಹುಬ್ಬಳ್ಳಿ : ಸೆ.14ರಿಂದ 25ರವರೆಗೆ ನಡೆಯಲಿರುವ ಗಣೇಶೋತ್ಸವವನ್ನು ಶಾಂತಿಯುತ, ಸುರಕ್ಷಿತ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವ್ಯಾಪಕ ಭದ್ರತಾ ಹಾಗೂ ಸಂಚಾರ ವ್ಯವಸ್ಥೆ ಕೈಗೊಂಡಿದ್ದಾರೆ.
ಗಣೇಶೋತ್ಸವ ಬಂದೋಬಸ್ತ್ಗೆ ಪೊಲೀಸ್ ಕಾನ್ಸ್ಟೆಬಲ್ನಿಂದ ಪೊಲೀಸ್ ಆಯುಕ್ತರವರೆಗೆ ನಗರ ಪೊಲೀಸ್ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊರ ಜಿಲ್ಲೆಗಳ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನೂ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಭದ್ರತೆಗಾಗಿ 500 ಗೃಹರಕ್ಷಕ ದಳದ ಸಿಬ್ಬಂದಿ, 8 CAR ತುಕಡಿಗಳು, 16 KSRP ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆ (RAF)ಯ ಒಂದು ಕಂಪನಿಯನ್ನು ಬಳಸಲಾಗುತ್ತಿದೆ.
ನಗರದ ಗಣೇಶ ಮಂಟಪಗಳು, ಮೆರವಣಿಗೆ ಮಾರ್ಗಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಮತ್ತು ಸಂಚಾರ ಪೊಲೀಸರ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ವಹಿಸಲಾಗುತ್ತದೆ. ವೈಮಾನಿಕ ಕಣ್ಗಾವಲಿಗಾಗಿ 30ಕ್ಕೂ ಹೆಚ್ಚು ಡ್ರೋನ್ಗಳನ್ನು ನಿಯೋಜಿಸಲಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್ಗಳ ಮೇಲೆ 24 ಗಂಟೆಗಳ ಕಾಲ ವಿಶೇಷ ನಿಗಾ ಇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಗಣೇಶ ಮಂಟಪಗಳ ಸ್ಥಳ ಹಾಗೂ ವಾಹನ ನಿಲುಗಡೆ ಮಾಹಿತಿಗಾಗಿ ವಿಶೇಷ ವೆಬ್ಸೈಟ್ ಸಿದ್ಧಪಡಿಸಲಾಗಿದ್ದು, ರಸ್ತೆಗಳಲ್ಲಿ ದೀರ್ಘಕಾಲದಿಂದ ನಿಲ್ಲಿಸಿರುವ ಅಥವಾ ಕೈಬಿಟ್ಟ ವಾಹನಗಳನ್ನು ತೆರವುಗೊಳಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತದೆ.
ಮಂಟಪಗಳಲ್ಲಿ ಅಗ್ನಿಶಾಮಕ ಸಾಧನ, ನೀರು ಮತ್ತು ಮರಳಿನ ಬಕೆಟ್ಗಳನ್ನು ಕಡ್ಡಾಯವಾಗಿ ಇಡಬೇಕು. ಸಿಸಿಟಿವಿ ಅಳವಡಿಸಿ ರಾತ್ರಿ ವೇಳೆ ಸ್ವಯಂಸೇವಕರನ್ನು ನಿಯೋಜಿಸುವಂತೆ ಸೂಚಿಸಲಾಗಿದೆ. ಆಂಬ್ಯುಲೆನ್ಸ್, ಅಗ್ನಿಶಾಮಕ ಹಾಗೂ ಇತರ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಮಂಟಪ ನಿರ್ಮಿಸುವಂತೆ ಮನವಿ ಮಾಡಲಾಗಿದೆ.
ಶಬ್ದ ಮಾಲಿನ್ಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿರುವ ಪೊಲೀಸರು, ಅತಿಯಾದ ಧ್ವನಿವರ್ಧಕ ಹಾಗೂ ಅಪಾಯಕಾರಿ ಲೇಸರ್ ಲೈಟ್ಗಳ ಬಳಕೆಯನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿದರೆ ಡಿಜೆ ಮಾಲಕರು ಮತ್ತು ಆಪರೇಟರ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.






