ಧಾರವಾಡ ಜಿಲ್ಲೆಯಲ್ಲಿ ಮುಂದುವರೆದ ಮಳೆ: ಕುಂದಗೋಳದಲ್ಲಿ ಓರ್ವ ವ್ಯಕ್ತಿ ಮೃತ್ಯು
ಹುಬ್ಬಳ್ಳಿಯಲ್ಲಿ ವ್ಯಕ್ತಿ ಕಣ್ಮರೆ; ಶೋಧ ಕಾರ್ಯ ಮುಂದುವರಿಕೆ

ಧಾರವಾಡ: ಕಳೆದ 24 ಗಂಟೆಯಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಧಾರವಾಡ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ.
ಕುಂದಗೋಳದಲ್ಲಿ ಓರ್ವ ವ್ಯಕ್ತಿ ಮೃತ್ಯು :
ಕುಂದಗೋಳ ತಾಲ್ಲೂಕು ಹಂಚಿನಾಳ ಗ್ರಾಮ ಬಳಿಯ ಹಳ್ಳವೊಂದರಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಕುಂದಗೋಳ ನಿವಾಸಿ ಶಿವಯ್ಯ ಬಸಯ್ಯ ವಟ್ನಾಲಮಠ (31) ಎಂಬವರು ಮೃತಪಟ್ಟಿದ್ದಾರೆ. ಅಲ್ಲದೆ, ಇವರೊಂದಿಗಿದ್ದ ಕುಂದಗೋಳ ನಿವಾಸಿ ವಾಸು ಶಿವಪ್ಪ ಬ್ಯಾಹಟ್ಟಿ (25) ಹಾಗೂ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಮಲ್ಲಿಕಾರ್ಜುನ ಶಿವಪ್ಪ ಅಂಚಟಗೇರಿ (26) ಎಂಬವರು ಗಾಯಗೊಂಡಿದ್ದಾರೆ. ಅವರನ್ನು ಕುಂದಗೋಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಹುಬ್ಬಳ್ಳಿಯಲ್ಲಿ ಓರ್ವ ಕಣ್ಮರೆ:
ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹುಬ್ಬಳ್ಳಿ ನಗರ ತಾಲೂಕಿನ ನೇಕಾರನಗರ ಬ್ರಿಜ್ ಹತ್ತಿರ ಬೈಕಿನಲ್ಲಿ ರಸ್ತೆ ದಾಟುವಾಗ ಹುಸೇನ್ ಸಾಬ್ ಸಯ್ಯದ್ ಸಾಬ್ ಕಳಸ (58) ಅವರು ನೀರಿನ ರಭಸಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಇವರೊಂದಿಗೆ ಬೈಕ್‍ನಲ್ಲಿದ್ದ ವ್ಯಕ್ತಿಯೊಬ್ಬರು ಅಪಾಯದಿಂದ ಪಾರಾಗಿದ್ದಾರೆ.
ತಹಶೀಲ್ದಾರ್ ಕಲ್ಲನಗೌಡ ಆರ್.ಪಾಟೀಲ್ ಅವರ ನೇತೃತ್ವದಲ್ಲಿ ತಾಲೂಕು ಆಡಳಿತವು ಕಣ್ಮರೆಯಾದ ವ್ಯಕ್ತಿಯ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ಕೈಗೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ.
ನವಲಗುಂದ ತಾಲ್ಲೂಕು ಜಲಾವೃತ :
ನವಲಗುಂದ ತಾಲ್ಲೂಕಿನಲ್ಲಿ ಬುಧವಾರ ಸುರಿದ ಮಳೆಗೆ ಯಮನೂರ ಗ್ರಾಮದ ಬೈಪಾಸ್ ಬಳಿ ಇರುವ ಕಾಶೀನಾಥ ಖೋಡೆ ಅವರ ಜಮೀನುದಲ್ಲಿ ನಿರ್ಮಿಸಿದ್ದ ಮನೆ ಸುತ್ತಲೂ ಬೆಣ್ಣಿ ಹಳ್ಳದ ನೀರು ಆವರಿಸಿ ಮನೆಯಲ್ಲಿ ನಾಲ್ಕು ಜನ ಕಾರ್ಮಿಕರು ಸಿಲುಕಿಕೊಂಡಿದ್ದರು.
ಪೊಲೀಸ್ ಹಾಗೂ ಅಗ್ನಿಶಾಮಕ ಪಡೆಗಳ ಸಹಾಯದಿಂದ ಜಲಾವೃತಗೊಂಡ ಮನೆಯಲ್ಲಿ ಸಿಲುಕಿದ್ದ ಬೆಳಗಾವಿಯ ಬಸವರಾಜ್ ಭಂಡಾರಿ, ವಿಜಯಲಕ್ಷ್ಮಿ ಭಂಡಾರಿ, ರಮ್ಯಾ ಭಂಡಾರಿ, ಸೌಮ್ಯ ಭಂಡಾರಿ ರಕ್ಷಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಮತ್ತು ತಹಶೀಲ್ದಾರ್ ಸುಧೀರ ಸಾಹುಕಾರ ಸಮ್ಮುಖದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಈಜು ತಜ್ಞರೊಂದಿಗೆ ರಕ್ಷಣೆ ಮಾಡಿ ನೀರಿನಿಂದ ಹೊರ ತರಲಾಯಿತು.
ಮನೆಹಾನಿ:
ನಿರಂತರ ಮಳೆಯಿಂದಾಗಿ ಜಿಲ್ಲೆಯ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ 3 ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ತಾಲೂಕಿನ ತಹಶೀಲ್ದಾರ್ ಅವರು ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಎಮ್.ಆರ್.ಪಾಟೀಲ್ ಅವರು ಕುಂದಗೋಳ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು.











