Hubballi | ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ಆರೋಪ; ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿ : ಬಿಜೆಪಿ ಕಾರ್ಯಕರ್ತೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರದ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ನಮ್ಮ ಪಕ್ಷದ ಮಹಿಳಾ ಕಾರ್ಯಕರ್ತೆಯನ್ನು ಪೊಲೀಸ್ ಅಧಿಕಾರಿ ಕೆ.ಎಸ್.ಹಟ್ಟಿ ಹಾಗೂ ಇನ್ನುಳಿದ ಹಲವು ಸಿಬ್ಬಂದಿಗಳು ಯಾರು ಈ ಘಟನೆಯಲ್ಲಿ ಭಾಗಿಯಾಗಿದ್ದರು ಅವರನ್ನು ಕೂಡಲೇ ಅಮಾನತು ಮಾಡಬೇಕು. ಇದರ ಜೊತೆಗೆ ಈ ಘಟನೆಗೆ ಕಾರಣರಾದ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲಕುಂಟ್ಲ ಅವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಮಾಡಿದರು.
ಮೇಯರ್ ಜ್ಯೋತಿ ಪಾಟೀಲ್ ಮತ್ತು ಉಪ ಮೇಯರ್ ಸಂತೋಷ್ ಚವ್ಹಾಣ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದರು. ಈ ವೇಳೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಕಮಿಷನರ್ ಸ್ಥಳಕ್ಕೆ ಬಂದು, ಬಿಜೆಪಿ ಕಾರ್ಯಕರ್ತರ ಮನವೊಲಿಸಲು ಯತ್ನಿಸಿದರು.
ಮೇಯರ್ ಜ್ಯೋತಿ ಪಾಟೀಲ್ ಆಕ್ರೋಶ :
ʼಮಹಿಳೆಗೆ ಆದ ಅನ್ಯಾಯದ ಕುರಿತು ನ್ಯಾಯ ಕೇಳಲು ಬಂದ ಮಹಿಳೆಯರನ್ನು ಅಪರಾಧಿಯ ಹಾಗೆ ನೋಡುತ್ತಿರುವುದು ಅಕ್ಷಮ್ಯ. ಸ್ವತಃ ಮೇಯರ್, ಉಪಮೇಯರ್ ಬಂದರೂ ಠಾಣೆ ಪ್ರವೇಶಿಸಲು ಅವಕಾಶ ನೀಡದೆ, ಅಡ್ಡಗಟ್ಟಿದ್ದು ಕಾನೂನು ಉಲ್ಲಂಘನೆ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದು ತಿಳಿಸುತ್ತೇನೆʼ ಎಂದು ಮೇಯರ್ ಜ್ಯೋತಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.







