Hubballi | ಮಹಿಳೆಯ ಅತ್ಯಾಚಾರಗೈದು ವೀಡಿಯೊ ಹರಿಬಿಟ್ಟ ಆರೋಪ; ಮೂವರ ಬಂಧನ

ಹುಬ್ಬಳ್ಳಿ : ಮಹಿಳೆಯ ಅತ್ಯಾಚಾರಗೈದು ನಂತರ ಮದ್ಯ ಕುಡಿಸಿ ಅಶ್ಲೀಲ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಲ್ಲಿ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಶಂಕರ ಕಾಲನಿ ನಿವಾಸಿಗಳಾದ ಶಿವಾನಂದ್(29), ಗಣೇಶ್ ಗಿಡ್ಡಣ್ಣವರ (31), ಪ್ರದೀಪ ಬಂಧಿತ ಆರೋಪಿಗಳು.
ಸಂತ್ರಸ್ತೆ ಹಾವೇರಿ ಮೂಲದ ಮಹಿಳೆ ಎಂದು ಗುರುತಿಸಲಾಗಿದೆ. ಆಕೆಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪ್ರಕರಣದ ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಆರೋಪಿಗಳನ್ನು ಸ್ಥಳೀಯರು ಥಳಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಕಮಿಷನರ್ ಎನ್. ಶಶಿಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿ, ಜ.9ರಂದು ರಾತ್ರಿ 11ರಿಂದ 12ರ ಸಮಯದಲ್ಲಿ ಹುಬ್ಬಳ್ಳಿಯ ಇಂಡಿ ಪಂಪ್ ಹತ್ತಿರ ಇರುವ ಅಂಬೇಡ್ಕರ್ ಮೈದಾನದಲ್ಲಿ 35 ವರ್ಷದ ಮಹಿಳೆಯನ್ನು ಇಬ್ಬರು ಯುವಕರು ಆಟೊದಲ್ಲಿ ಕರೆದುಕೊಂಡು ಬಂದು ಅನುಚಿತ ವರ್ತನೆ ತೋರಿ ಮತ್ತು ದೈಹಿಕ ಸಂಪರ್ಕ ಬೆಳೆಸಿ ನಂತರ ಮಹಿಳೆಗೆ ಮದ್ಯಪಾನವನ್ನು ಮಾಡಿಸಿ ತಮ್ಮ ಮೊಬೈಲ್‌ನಲ್ಲಿ ಆಕೆಯ ಅಶ್ಲೀಲ ವೀಡಿಯೊಗಳನ್ನು ಮಾಡಿದ್ದಾರೆ. ಈ ವೀಡಿಯೊಗಳನ್ನು ಸಾರ್ವಜನಿಕರು ನಮಗೆ ನೀಡಿದ್ದು, ವೀಡಿಯೊಗಳನ್ನು ಆಧರಿಸಿ ಸಂತ್ರಸ್ತ ಮಹಿಳೆಯ ಗುರುತು ಪತ್ತೆ ಹಚ್ಚಲಾಗಿದೆ.
ಮೊದಲಿಗೆ ನಾವು ಸುವೋಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದೆವು. ನಂತರ ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ಪಡೆದುಕೊಂಡು ಅತ್ಯಾಚಾರ ಹಾಗೂ ಐಟಿ ಆಕ್ಟ್ ಸೇರಿದಂತೆ ವಿವಿಧ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶಿವಾನಂದ್, ಗಣೇಶ್ ಗಿಡ್ಡಣ್ಣವರ ಎಂಬ ಆರೋಪಿಗಳು ಮಹಿಳೆಯನ್ನು ಕರೆದುಕೊಂಡು ಹೋಗಿ ಕೃತ್ಯವನ್ನು ಎಸಗಿದ್ದು ಹಾಗೂ ಇವರು ಮಾಡಿದಂತ ವೀಡಿಯೊವನ್ನು ಪ್ರದೀಪ ಎಂಬಾತ ಬೇರೆಯವರಿಗೆ ಹರಿಬಿಟ್ಟಿದ್ದಾನೆ.
ಘಟನೆ ಸ್ಥಳೀಯರ ಗಮನಕ್ಕೆ ಬಂದ ಕೂಡಲೇ ಇಬ್ಬರನ್ನು ಕರೆಸಿ ಥಳಿಸಿದ್ದಾರೆ, ಸಾರ್ವಜನಿಕರಿಂದ ಹಲ್ಲೆಗೊಳಗಾದ ಶಿವಾನಂದ ಕೂಡ ಮರು ಪ್ರಕರಣವನ್ನು ದಾಖಲಿಸಿದ್ದಾನೆ ಎಂದು ಹುಬ್ಬಳ್ಳಿ ಧಾರವಾಡ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.







