Hubballi | ವಿಶ್ವ ಶಾಂತಿಗಾಗಿ ತಕ್ಷಣವೇ ಯುದ್ಧ ನಿಲ್ಲಿಸಲು ಆಗ್ರಹ; ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರಿಂದ ಧರಣಿ

ಹುಬ್ಬಳ್ಳಿ : ಇರಾನ್ ಮತ್ತು ಜಗತ್ತಿನ ಇತರ ಭಾಗಗಳ ಮೇಲೆ ಅಮೆರಿಕ-ಇಸ್ರೇಲ್ ನಡೆಸುತ್ತಿರುವ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳವಾರ ಹುಬ್ಬಳ್ಳಿಯ ಡಾ. ಅಂಬೇಡ್ಕರ್ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ‘ವಿಶ್ವ ಶಾಂತಿಗಾಗಿ ಯುದ್ಧ ವಿರೋಧಿಸಿ’ ಕಾರ್ಮಿಕರ ಪ್ರದರ್ಶನ ನಡೆಯಿತು.
ಈ ವೇಳೆ ಮಾತನಾಡಿದ ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ್, ಇರಾನ್ ಮೇಲಿನ ಯುಎಸ್-ಇಸ್ರೇಲ್ ಮಿಲಿಟರಿ ಆಕ್ರಮಣವನ್ನು ಬಲವಾಗಿ ಖಂಡಿಸಿದರು. ಜಾಗತಿಕವಾಗಿ ತೈಲೋತ್ಪನ್ನಗಳ ಮೇಲೆ ಅಧಿಪತ್ಯ ಸಾಧಿಸಲು ಸಲುವಾಗಿ ಅಮೆರಿಕ ಹೀನ ಕೃತ್ಯಕ್ಕೆ ಇಳಿದಿದ್ದು, ವೆನಿಝುವೆಲಾ, ಲಿಬಿಯಾ, ಇರಾನ್ ಮೇಲೆ ದಾಳಿ ನಡೆಸಿದೆ. ಇದರಿಂದ ಭಾರತದ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸುವಂತಾಗಿದೆ. ಹೀಗಾಗಿ ಈ ಸಾಮ್ರಾಜ್ಯಶಾಹಿ ಯುದ್ಧವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿ, ಅಮೆರಿಕ ಏಕಪಕ್ಷೀಯ ಅಸಮಂಜಸ ಸುಂಕ ಯುದ್ಧದ ನಂತರ, ಈಗ ಇರಾನ್ ಮೇಲೆ ಏಕಪಕ್ಷೀಯ ಬಾಂಬ್ ದಾಳಿಯು ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಸ್ಥಿತಿಗೆ ಮತ್ತು ಇಡೀ ಜಗತ್ತನ್ನು ಆರ್ಥಿಕ ಪ್ರಕ್ಷುಬ್ಧತೆಯ ಸ್ಥಿತಿಗೆ ತಳ್ಳಿದೆ. ನಾಗರಿಕ ಮೂಲಸೌಕರ್ಯ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ನಗರ ಪ್ರದೇಶಗಳನ್ನು ಹೇಡಿತನದಿಂದ ಗುರಿಯಾಗಿಸಿಕೊಂಡಿರುವುದು ಜಿನೇವಾ ಸಮಾವೇಶಗಳು ಸೇರಿದಂತೆ ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುತ್ತದೆ. ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಆಯತುಲ್ಲಾ ಖಾಮಿನೈ ಮತ್ತು ಅನೇಕ ನಾಯಕರು ಕೊಲ್ಲಲ್ಪಟ್ಟಿದ್ದಾರೆ. ದಕ್ಷಿಣ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಗುರಿಯಾಗಿಟ್ಟುಕೊಂಡು ನಡೆಸಿದ ಬಾಂಬ್ ದಾಳಿಯಲ್ಲಿ 165 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಇದು ಅಪರಾಧಿ ಆಡಳಿತಗಳ ಕ್ರೌರ್ಯ ಮತ್ತು ಅನಾಗರಿಕತೆಯ ವಿಸ್ತರಣೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಮಹೇಶ ಪತ್ತಾರ, ಬಿ.ಐ.ಈಳಿಗೇರ, ತಿಲಕ ಗೌಡ, ಯಮುನಾ ಗಾಂವಕರ, ಗುರುಸಿದ್ದಪ್ಪ ಅಂಬಿಗೇರ, ಬಾಬಾಜಾನ ಮುಧೋಳ, ಚಿದಾನಂದ ಸವದತ್ತಿ, ಮಂಜುಳಾ ಪವಾರ, ಬಸೀರ ಮುಧೋಳ, ದೊಡ್ಡವ್ವ ಪೂಜಾರಿ, ಮಹೇಶ ಹುಲಗೋಡ, ಜಯಶ್ರೀ, ದೊಡ್ಡವ್ವ ಪೂಜಾರಿ, ಮಂಜುನಾಥ ಹುಜರಾತಿ, ಮಂಜುಳಾ ಪವಾರ ಹಾಗು ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
ಎರಡು ವರ್ಷಗಳ ಹಿಂದೆ ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ 70 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದು ಅಮೆರಿಕ ಮತ್ತು ಇಸ್ರೇಲ್ ಯುದ್ಧ ದಾಹಕ್ಕೆ ಉದಾಹರಣೆ ಆಗಿದೆ. ಸಮಾಜವಾದಿ ದೇಶಗಳ ಅನುಪಸ್ಥಿತಿಯಿಂದಾಗಿ ಅಮೆರಿಕನ್ ಸಾಮ್ರಾಜ್ಯಶಾಹಿ ಏಕಚಕ್ರಾಧಿಪತ್ಯದಿಂದಾಗಿ ಜಗತ್ತು ನಲುಗಿ ಹೋಗಿದೆ. ಇದರ ವಿರುದ್ಧ ಜಾಗತಿವಾಗಿ ಪ್ರತಿರೋಧ ಬೆಳೆದು ಬರಬೇಕು.
ಸನತ್ ಕುಮಾರ್ ಬೆಳಗಲಿ, ಹಿರಿಯ ಪತ್ರಕರ್ತ







