Hubballi : ಬಾಲಕಿಗೆ ಹೆರಿಗೆ ಪ್ರಕರಣ; ವೈದ್ಯರು ಸಹಿತ 7 ಮಂದಿಯ ವಿರುದ್ಧ ಎಫ್‌ಐಆರ್

ಹುಬ್ಬಳ್ಳಿ : ಬಾಲಕಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಕರಣಕ್ಕೆ ಸಂಬಂಧಿಸಿ, ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಯುವಕನ ವಿರುದ್ಧ ಪೊಕ್ಸೊ ಕಾಯ್ದೆಯಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ಪ್ರಕರಣದಲ್ಲಿ ಗರ್ಭಧಾರಣೆಯ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳಿಗೆ ತಿಳಿಸದೇ ಮುಚ್ಚಿಟ್ಟಿದ್ದಾರೆ ಎಂಬ ಆರೋಪದ ಮೇರೆಗೆ ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದ ವೈದ್ಯರೊಬ್ಬರು, ಹುಬ್ಬಳ್ಳಿಯ ಖಾಸಗಿ ನರ್ಸಿಂಗ್ ಹೋಮ್‌ನ ಮೂವರು ವೈದ್ಯರು ಹಾಗೂ ಬಾಲಕಿಯ ತಂದೆ-ತಾಯಿಯ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.
ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ದೀಪಾ ಜಾವೂರ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನ ಪ್ರಕಾರ, ಸುಮಾರು ಒಂದು ವರ್ಷದ ಹಿಂದೆ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಮನೆಯೊಂದರಲ್ಲಿ ಬಲವಂತವಾಗಿ ಇರಿಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದರ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಬಳಿಕ ಆರೋಪಿಯು ಪರಾರಿಯಾಗಿದ್ದಾನೆ. ನಂತರ ಬಾಲಕಿ ಮನೆಗೆ ಮರಳಿದಾಗ ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಬಳಿಕ ಪೋಷಕರು ಬಾಲಕಿಯನ್ನು ಕಲಘಟಗಿ ತಾಲೂಕಿನ ಚಳಮಟ್ಟಿ ಗ್ರಾಮದ ವೈದ್ಯರ ಬಳಿ ಕರೆದೊಯ್ದಿದ್ದು, ಅವರ ಸಲಹೆಯಂತೆ ಹುಬ್ಬಳ್ಳಿಯ ಖಾಸಗಿ ನರ್ಸಿಂಗ್ ಹೋಮ್‌ಗೆ ದಾಖಲಿಸಲಾಗಿದೆ. ಅಲ್ಲಿ ಬಾಲಕಿ ಅಪ್ರಾಪ್ತಳಾಗಿದ್ದು ಗರ್ಭಿಣಿಯಾಗಿರುವುದು ತಿಳಿದಿದ್ದರೂ, ಕಡ್ಡಾಯವಾಗಿ ಮಾಹಿತಿ ನೀಡಬೇಕಾದ ಸಂಬಂಧಿತ ಇಲಾಖೆಗಳಿಗೆ ತಿಳಿಸದೆ ಚಿಕಿತ್ಸೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜು.8ರಂದು ಬಾಲಕಿ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಆಕೆಯನ್ನು ಮೊದಲು ಖಾಸಗಿ ಆಸ್ಪತ್ರೆಗೆ, ನಂತರ ಹೆಚ್ಚಿನ ಚಿಕಿತ್ಸೆಗೆ ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಕೆಎಂಸಿ-ಆರ್‌ಐ ಮುಖ್ಯ ವೈದ್ಯಾಧಿಕಾರಿ ಡಾ. ರಾಜಶೇಖರ, ಆಸ್ಪತ್ರೆಗೆ ದಾಖಲಾದ ಬಳಿಕ ದಾಖಲೆಗಳ ಪರಿಶೀಲನೆ ವೇಳೆ ಬಾಲಕಿಯ ವಯಸ್ಸು 14 ವರ್ಷ 3 ತಿಂಗಳು ಎಂಬುದು ದೃಢಪಟ್ಟಿದೆ. ತಾಯಿ ಮತ್ತು ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪ್ರಮುಖ ಆರೋಪಿ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಉಳಿದ ಆರೋಪಿಗಳ ಬಂಧನ ಇನ್ನೂ ನಡೆದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.






