ಹುಬ್ಬಳ್ಳಿ ಶ್ರೀಮಾತಾ ಆಶ್ರಮದ ಮೇಲೆ ಕಾನೂನು ಸೇವಾ ಪ್ರಾಧಿಕಾರ ದಾಳಿ

ಸಾಂದರ್ಭಿಕ ಚಿತ್ರ | PC : Image by redgreystock on Magnific
ಹುಬ್ಬಳ್ಳಿ : ದಾಖಲೆಗಳಿಲ್ಲದೆ ಬಾಲಕಿಯರಿಗೆ ವಸತಿ ಹಾಗೂ ಶಿಕ್ಷಣ ನೀಡುತ್ತಿರುವ ಆರೋಪದಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಇಲ್ಲಿನ ಡಾಲರ್ಸ್ ಕಾಲನಿಯ ಶ್ರೀಮಾತಾ ಆಶ್ರಮದ ಮೇಲೆ ಮಂಗಳವಾರ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ 15 ಮಂದಿ ಬಾಲಕಿಯರನ್ನು ರಕ್ಷಣೆ ಮಾಡಿ ನವನಗರದ ಬಾಲಕಿಯರ ವಸತಿ ಗೃಹಕ್ಕೆ ರವಾನಿಸಲಾಗಿದೆ. ದಾಳಿ ಹಿನ್ನೆಲೆಯಲ್ಲಿ ಆಶ್ರಮದ ಸುತ್ತಮುತ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಶಿಕ್ಷಣ ನೀಡುವ ಉದ್ದೇಶದಿಂದ ಬಾಲಕಿಯರನ್ನು ಆಶ್ರಮದಲ್ಲಿ ಇರಿಸಿಕೊಂಡಿರುವುದಾಗಿ ತಿಳಿದು ಬಂದಿತ್ತು. ಪರಿಶೀಲನೆ ವೇಳೆ ಮಕ್ಕಳ ಶಿಕ್ಷಣ, ಹಾಜರಾತಿ ಹಾಗೂ ಆಶ್ರಮದಲ್ಲಿ ವಾಸದ ಕುರಿತು ಅಗತ್ಯ ದಾಖಲೆಗಳು ನಿರ್ವಹಿಸದಿರುವುದು ಕಂಡುಬಂದಿದೆ ಎನ್ನಲಾಗಿದೆ.
ಶ್ರೀ ಶಾರದಾ ಆಶ್ರಮ ಟ್ರಸ್ಟ್ ಅಡಿಯಲ್ಲಿ ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ 5 ರಿಂದ 12 ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವುದಾಗಿ ಸಂಸ್ಥೆಯವರು ತಿಳಿಸಿದ್ದರೂ ಇದಕ್ಕೆ ಸರಕಾರದಿಂದ ಪಡೆದ ಅನುಮತಿ ಅಥವಾ ಮಾನ್ಯತಾ ಪತ್ರಗಳನ್ನು ಪರಿಶೀಲನೆ ಸಂದರ್ಭ ಹಾಜರುಪಡಿಸಿಲ್ಲ. ಆಶ್ರಮದಲ್ಲಿ ವಾಸಿಸುತ್ತಿದ್ದರೂ ಅವರ ಪ್ರವೇಶ ಹಾಗೂ ವಾಸಕ್ಕೆ ಸಂಬಂಧಿಸಿದ ನೋಂದಣಿ ದಾಖಲೆಗಳು ಲಭ್ಯವಿಲ್ಲ. ಮಕ್ಕಳಿಗೆ ನೀಡಲಾಗುವ ಆಹಾರದ ಕುರಿತಾದ ದಾಖಲೆಗಳನ್ನೂ ನಿರ್ವಹಿಸಿರುವುದು ಕಂಡು ಬಂದಿಲ್ಲ. ಹಾಜರಾತಿಯೂ ಸರಿಯಾಗಿ ಕಂಡು ಬಂದಿಲ್ಲ ಎನ್ನಲಾಗಿದೆ.
ಇನ್ನೂ ಕೆಲವು ಬಾಲಕಿಯರ ಅಂಕಪಟ್ಟಿ ಎಂದು ನೀಡಿರುವ ದಾಖಲೆಗಳೂ ಅಧಿಕೃತ ಅಂಕಪಟ್ಟಿಯಲ್ಲ ಎಂದು ಪರಿಶೀಲನಾ ತಂಡಕ್ಕೆ ತಿಳಿದು ಬಂದಿದೆ. ಇನ್ನೂ ಮಕ್ಕಳ ನಿರಂತರ ಹಾಜರಾತಿ ಹಾಗೂ ಶಿಕ್ಷಣ ಅವಧಿಗೆ ಸಂಬಂಧಿಸಿದ ಸಮಗ್ರ ದಾಖಲೆಗಳು ತಂಡಕ್ಕೆ ಲಭ್ಯವಾಗಿಲ್ಲ ಎನ್ನಲಾಗಿದೆ.
ಆಶ್ರಮದಲ್ಲಿ ಬಳಸಲಾಗುತ್ತಿರುವ ಪಠ್ಯಪುಸ್ತಕಗಳನ್ನು ಬಿಇಒ ಪರಿಶೀಲಿಸಿದ್ದು, ಅವು ಮಾನ್ಯತೆ ಪಡೆದ ಪಠ್ಯಪುಸ್ತಕಗಳಲ್ಲ ಎಂದು ದೃಢಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹ ಕಾರ್ಯದರ್ಶಿ ಪ್ರತಿಕ್ರಿಯಿಸಿ, ಮೂರು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಸಂಸ್ಥೆಯವರು ಹೇಳಿಕೊಂಡಿದ್ದು, ಮಕ್ಕಳಿಗೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಒಪನ್ ಸ್ಕೂಲಿಂಗ್ (ಎನ್ಐಒಎಸ್) ಅಡಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾತಾ ತೇಜೋಮಯಿ ಅವರು ತಿಳಿಸಿದ್ದರೂ, ದಿಲ್ಲಿಯ ಎನ್ಐಒಎಸ್ನಲ್ಲಿ ನೋಂದಣಿಯಾಗಿರುವುದಕ್ಕೆ ದಾಖಲೆಗಳು ಪರಿಶೀಲನೆ ವೇಳೆ ದೊರಕಿಲ್ಲ ಎಂದು ತಿಳಿಸಿದ್ದಾರೆ.
ಶಿಕ್ಷಣ ನೀಡಲು ಆಶ್ರಮ ಹಾಗೂ ವಸತಿ ಸಂಸ್ಥೆಯಲ್ಲಿ ಮಕ್ಕಳ ಇಟ್ಟುಕೊಳ್ಳಬೇಕಾದರೆ ಜೆಜೆಎ ಕಾಯ್ದೆ ಪ್ರಕಾರ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಯಾವುದೇ ಕಾನೂನು ಮಾತಾಶ್ರೀ ಅವರು ಪಾಲನೆ ಮಾಡಿಲ್ಲ. ಇಲಾಖೆಯಲ್ಲಿ ಚರ್ಚಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎ.ಎಂ. ಬಡಿಗೇರ ಹೇಳಿದರು.
ಗುರುಕುಲ ಮಾದರಿಯಲ್ಲಿ ಶ್ರೀ ಶಾರದಾ ಆಶ್ರಮ ಟ್ರಸ್ಟ್ ಅಡಿಯಲ್ಲಿ ಮಕ್ಕಳಿಗೆ 5 ರಿಂದ 12ನೇ ತರಗತಿವರೆಗೆ ಶಿಕ್ಷಣ ನೀಡುತ್ತಿರುವುದಾಗಿ ಸಂಸ್ಥೆಯವರು ತಿಳಿಸಿದ್ದರು. ಆದರೆ, ಇದಕ್ಕೆ ಸರಕಾರದಿಂದ ಪಡೆದ ಅನುಮತಿ ಅಥವಾ ಮಾನ್ಯತಾ ಪತ್ರಗಳನ್ನು ಪರಿಶೀಲನೆ ಸಂದರ್ಭ ಹಾಜರುಪಡಿಸಿಲ್ಲ. ಆಶ್ರಮದಲ್ಲಿ ವಾಸಿಸುತ್ತಿದ್ದರೂ, ಅವರ ಪ್ರವೇಶ ಹಾಗೂ ವಾಸಕ್ಕೆ ಸಂಬಂಧಿಸಿದ ನೋಂದಣಿ ದಾಖಲೆಗಳು ಲಭ್ಯವಿಲ್ಲ.
ಎ.ಎಂ. ಬಡಿಗೇರ, ಧಾರವಾಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹ ಕಾರ್ಯದರ್ಶಿ
‘ಶಿಕ್ಷಣ ಇಲಾಖೆ ಅನುಮತಿ ಪಡೆದು ಮುಂದುವರಿಸುತ್ತೇವೆ’
ಶ್ರೀಮಾತಾ ಆಶ್ರಮ 23 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ಸೇವೆ ಸಲ್ಲಿಸುತ್ತಿದೆ. ಶ್ರೀ ಶಾರದಾ ಆಶ್ರಮ ಟ್ರಸ್ಟ್ ಅಡಿಯಲ್ಲಿ ಹೆಣ್ಣು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ, ವ್ಯಕ್ತಿತ್ವ ವಿಕಸದಂತ ಶಿಕ್ಷಣವನ್ನು ನೀಡಲಾಗುತ್ತದೆ. ಎನ್ಐಒಎಸ್ ಅಡಿ ಪರೀಕ್ಷೆಯೂ ನಡೆಸಲಾಗುತ್ತದೆ. ಆಶ್ರಮದಲ್ಲಿ ಪಾಠ ಪ್ರವಚನ ನಡೆಯುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೂರ್ವ ಸೂಚನೆ ನೀಡದೆ ಏಕಾಏಕಿ ಬಂದು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ. ಸ್ವತಃ ಮಕ್ಕಳ ತಂದೆ-ತಾಯಿಯರೇ ತಮ್ಮ ಮಕ್ಕಳು ಸಂಸ್ಕಾರವಂತರಾಗಲಿ ಎಂಬ ಉದ್ದೇಶದಿಂದ ಇಲ್ಲಿ ಬಿಟ್ಟು ಹೋಗಿದ್ದಾರೆ. ಅಧಿಕಾರಿಗಳ ನಡೆಯಿಂದ ಮಕ್ಕಳಿಗೆ ಭಯವಾಗಿತ್ತು. ಆಶ್ರಮದಲ್ಲಿ ವಿವೇಕಾನಂದ ತತ್ವದಡಿ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಮುಂದುವರಿಸುತ್ತೇವೆ ಎಂದು ಶ್ರೀಮಾತಾ ಆಶ್ರಮ ಮಾತಾ ತೇಜೋಮಯಿ ಮಾಧ್ಯಮದವರಿಗೆ ತಿಳಿಸಿದ್ದಾರೆ.






