Hubballi | ಕೃಷಿ ಸಾಲ ಮನ್ನಾ, ಮಹದಾಯಿ ಯೋಜನೆ ಜಾರಿಗಾಗಿ ಆಗ್ರಹಿಸಿ ಪ್ರತಿಭಟನೆ

ಹುಬ್ಬಳ್ಳಿ : ಕೇಂದ್ರ ಸರಕಾರ ತಕ್ಷಣವೇ ಕೃಷಿ ಸಾಲ ಮನ್ನಾ ಮಾಡಬೇಕು ಮತ್ತು ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಯ ತೊಡಕು ಶೀಘ್ರ ಇತ್ಯರ್ಥ ಮಾಡುವಂತೆ ಆಗ್ರಹಿಸಿ ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮಿತಿಯಿಂದ ಶನಿವಾರ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದು ತೇಜಿ, ಈಗಾಗಲೇ ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡಿರುವ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್ ಗಳ ಕೃಷಿ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿ ಬರವಿರುವುದರಿಂದ ಒಂದು ಭಾರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕಳಸಾ ಬಂಡೂರಿ ಯೋಜನೆಗಿರುವ ತೊಡಕುಗಳನ್ನು ರಾಜ್ಯದ ಪ್ರತಿನಿಧಿ ಆಗಿರುವ ಕೇಂದ್ರ ಸಚಿವ ಜೋಶಿ ಅವರೇ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಬಾಬಾಜಾನ್ ಮುಧೋಳ ಮಾತನಾಡಿ, ಕೇಂದ್ರದಲ್ಲಿ, ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು, ಮೂರೂ ರಾಜ್ಯದ ಸಿಎಂಗಳ ಸಭೆ ಕರೆದು ಪ್ರಧಾನಿ ಮಧ್ಯಸ್ಥಿಕೆಯಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸಬೇಕು. ಮಹದಾಯಿ ಸಮಸ್ಯೆ ಇತ್ಯರ್ಥವಾದರೆ ಉತ್ತರ ಕರ್ನಾಟಕದ ನೀರಿನ ಬವಣೆ ತಪ್ಪಲಿದೆ. ಹೀಗಾಗಿ, ಶೀಘ್ರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿ.ಎ.ಮುಧೋಳ, ರಮೇಶ ಭೋಸ್ಲೆ, ವಿಶ್ವನಾಥ ಪೂಜಾರಿ, ಮುತ್ತಣ್ಣ ಬಾಡಿನ, ಬಸಣ್ಣ ನಲವಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.






