ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ʼನವಲಗುಂದ ಬಂದ್ʼ

ನವಲಗುಂದ : ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹದಾಯಿ-ಕಳಸಾ ಬಂಡೂರಿ ಜಾತ್ಯಾತೀತ ಹಾಗೂ ಪಕ್ಷಾತೀತ ರೈತ ಹೋರಾಟ ಒಕ್ಕೂಟ ಹಾಗೂ ಸಮಗ್ರ ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಮತ್ತು ಜೆನ್-ಝಿ ಯುವ ರೈತ ವಿದ್ಯಾರ್ಥಿ ಮಿತ್ರರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕರೆ ನೀಡಲಾಗಿದ್ದ ನವಲಗುಂದ ಬಂದ್ ಯಶಸ್ವಿಗೊಂಡಿತು.
ಸ್ಥಳೀಯ ಪಂಚಗ್ರಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶಿವಾಚಾರ್ಯರು, ರೈತ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಮಹಿಳೆಯರು ಪಂಚಗ್ರಹ ಹಿರೇಮಠದಿಂದ ರೈತ ಭವನದ ವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.
ನಂತರ ಜರುಗಿದ ಬೃಹತ್ ರೈತ ಸಮಾವೇಶದಲ್ಲಿ ನರಗುಂದ ಪತ್ರಿವನ ಮಠದ ಗುರುಸಿದ್ಧ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನಾಡಿಗೆ ಅನ್ನ ನೀಡುವ ರೈತರ ಕುಲ ಒಂದೇ ಆಗಿದೆ. ರೈತರು ಸಂಕಷ್ಟದಲ್ಲಿದ್ದಾಗ ನೆರವಿಗೆ ಧಾವಿಸಿ ಪರಿಹಾರ ಒದಗಿಸುವುದು ಕರ್ತವ್ಯವಾಗಿದ್ದರೂ ಸರಕಾರಗಳು ರೈತರನ್ನು ಕಡೆಗಣಿಸಿ ರಾಜಕಾರಣ ಮಾಡುತ್ತಿರುವುದು ನಾಡಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಒಕ್ಕೂಟಗಳ ಅಧ್ಯಕ್ಷ ಲೋಕನಾಥ ಹೆಬಸೂರ, ಮಾಜಿ ಸಚಿವ ಕೆ.ಎನ್. ಗಡ್ಡಿ ಮಾತನಾಡಿ, ಮಹಾದಾಯಿ-ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕಾಗಿ ಕಳೆದ 11 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರಗಳು ಈ ಯೋಜನೆಯನ್ನು ತನ್ನ ರಾಜಕೀಯ ದಾಳಕ್ಕಾಗಿ ಬಳಸಿಕೊಳ್ಳುವ ಮೂಲಕ ರೈತರ ಸಹನೆ ಕೆಣಕುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದರು.
ಭೈರನಟ್ಟಿ ಗ್ರಾಮದ ವಿರಕ್ತಮಠದ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ರಘುನಾಥ ನಡುವಿನಮನಿ, ಶ್ರೀಶೈಲ ಮೂಲಿಮನಿ, ಮಹಾದೇವಿ ಹೂಯಿಲಗೋಳ ಹಾಗೂ ಪ್ರೇಮಾ ನಾಯ್ಕರ, ಮೈಲಾರಪ್ಪ ವೈದ್ಯ, ವಿಕ್ರಂ ಕುರಿ, ಅಣ್ಣಪ್ಪ ಬಾಗಿ, ರಿಯಾಜ್ ನಾಶಿಪುಡಿ, ಶಿರಾಜ್ ಧಾರವಾಡ, ಉಮೇಶ ನವಲಗುಂದ, ಡಿ.ಕೆ. ಹಳ್ಳದ, ಶಿವಾನಂದ ಕೊಳಲಿನ, ಮಲ್ಲಿಕಾರ್ಜುನಗೌಡ ಪಾಟೀಲ್ ಕುಲಕರ್ಣಿ, ನೇತಾಜಿ ಕಲಾಲ ಸೇರಿದಂತೆ ಸಾವಿರಾರು ರೈತರು ಪಾಲ್ಗೊಂಡಿದ್ದರು. ಜತೆಗೆ ತಾಲೂಕಿನ ಕನ್ನಡಪರ ಸಂಘಟನೆ ಸೇರಿದಂತೆ ಹತ್ತಾರು ಸಂಘಟನೆಗಳು ನವಲಗುಂದ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದವು.






