ಹುಬ್ಬಳ್ಳಿ: ಫೋನ್‌ಇನ್‌ನಲ್ಲಿ ರಸ್ತೆ, ನೀರು, ಸ್ವಚ್ಛತೆ ಸಮಸ್ಯೆಗಳ ಸದ್ದು

ಹುಬ್ಬಳ್ಳಿ : ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಮೇಯರ್ ಜೊತೆ ಮಾತುಕತೆಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ಹದಗೆಟ್ಟ ರಸ್ತೆ ಸರಿಪಡಿಸುವುದು, ಚಿಟಗುಪ್ಪಿ ಆಸ್ಪತ್ರೆಯ ಲಿಫ್ಟ್ ದುರಸ್ತಿ, ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ವಿವಿಧ ಸಮಸ್ಯೆಗಳು ಕೇಳಿಬಂದವು.
ಕರೆ ಮಾಡಿದ ಬಹುತೇಕರು, ಕಸ ವಿಲೇವಾರಿ, ರಸ್ತೆ ಸಮಸ್ಯೆ, ಧೂಳು, ಕಾಮಗಾರಿ ವಿಳಂಬಗಳ ಅಹವಾಲು ಸಲ್ಲಿಸಿದರು. ಈ ವೇಳೆ ರಾಜಶೇಖರ ಟೊಂಗಳಿ ಮಾತನಾಡಿ, ಅವಳಿ ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಮೇಲ್ಸೇತುವೆ ಕಾಮಗಾರಿ ವಿಳಂಬದಿಂದ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಆದಷ್ಟು ಬೇಗ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಿಜಯಕುಮಾರ ಎಂಬುವವರು ಮಾತನಾಡಿ, ಮೊರಾರ್ಜಿ ನಗರದಲ್ಲಿ ಪಾದಚಾರಿ ಮಾರ್ಗದ ಮೇಲೆ ಗಿಡ-ಗಂಟಿಗಳು ಬೆಳೆದಿದ್ದು, ಸ್ವಚ್ಛಗೊಳಿಸಲು ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಪಾಲಿಕೆಯಿಂದ ಕ್ರಮ ಕೈಗೊಂಡಿಲ್ಲ. ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚನ್ನಪೇಟೆಯಲ್ಲಿ ಸಿ.ಸಿ.ರಸ್ತೆ ನಿರ್ಮಿಸಲಾಗಿದ್ದು, ಕೆಲವೆಡೆ ಮಾತ್ರ ಪಾದಚಾರಿ ಮಾರ್ಗವಿದೆ. ಇನ್ನುಳಿದ ಕಡೆ ಪೇವರ್ಸ್ ಅಳವಡಿಸಿ ಪಾದಚಾರಿಗಳಿಗೆ ಅನುಕೂಲಕಲ್ಪಿಸಬೇಕೆಂದು ಮತ್ತೊಬ್ಬರು ಮನವಿ ಮಾಡಿದರು.
ಹಳೇ ಹುಬ್ಬಳ್ಳಿ ಭಾಗದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ 4 ಇಂಚಿನ ಪೈಪ್ ಅಳವಡಿಸಿರುವುದರಿಂದ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈ ಹಿಂದೆ 6 ಇಂಚಿನ ಪೈಪ್ ಇದ್ದು, ಅದನ್ನೇ ಅಳವಡಿಸಬೇಕು. ಈ ಕುರಿತು ಕಂಪನಿ ಸಿಬ್ಬಂದಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ನಿವಾಸಿಯೊಬ್ಬರು ದೂರಿದರು.
ಹಳೇ ಹುಬ್ಬಳ್ಳಿಯ ಗ್ರಾಮ ದೇವತೆ ದೇವಸ್ಥಾನದ ಬಳಿ ಮೂರು ತಿಂಗಳಿಂದ ಒಳಚರಂಡಿ ಚೇಂಬರ್ ಕಟ್ಟಿಕೊಂಡಿದೆ. ಇದರಿಂದ ಮನೆಗಳ ಶೌಚಾಲಯದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಅಶೋಕ ಕುಂಜಗಿ ಎಂಬುವವರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಈ ಪ್ರದೇಶ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ತಾತ್ಕಾಲಿಕವಾಗಿ ಜೆಟ್ಟಿಂಗ್ ಯಂತ್ರದ ಮೂಲಕ ಒಳಚರಂಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜತೆಗೆ ಅವಳಿ ನಗರದಲ್ಲಿನ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಳ್ಳುತ್ತಿರುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಎಲ್ಲ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.
ಈ ವೇಳೆ ಪಾಲಿಕೆ ಉಪಆಯುಕ್ತ ವಿಜಯ ಕುಮಾರ ಸೇರಿದಂತೆ ಅಧಿಕಾರಿಗಳು ಪಾಲ್ಗೊಂಡಿದ್ದರು.
42 ದೂರುಗಳು
ಫೋನ್‌ಇನ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ದುರ್ಗಮ್ಮ ಬಿಜವಾಡ, ಫೋನ್‌ಇನ್ ಕಾರ್ಯಕ್ರಮದಲ್ಲಿ ಒಟ್ಟು 42 ದೂರುಗಳು ಬಂದಿದ್ದು, ಇದರಲ್ಲಿ ನೀರು, ಸ್ವಚ್ಛತೆ, ಚರಂಡಿ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚಿನ ಕರೆಗಳಾಗಿದ್ದವು. ಪಾಲಿಕೆ ಅಧಿಕಾರಿಗಳು ಪ್ರತಿ ವಾರ್ಡ್‌ಗೆ ಕಡ್ಡಾಯವಾಗಿ ಭೇಟಿ ನೀಡಿ ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇ-ಸ್ವತ್ತು ಸಮಸ್ಯೆಗಳನ್ನೂ ಪರಿಹರಿಸಲು ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದರು.






