Hubballi : ಅತಿವೇಗದಿಂದ ಲಾರಿ ಚಾಲನೆ ಆರೋಪ; 20 ವಿದ್ಯುತ್ ಕಂಬಗಳು ಧರೆಗೆ, ಬೈಕ್, ಟ್ರ್ಯಾಕ್ಟರ್ಗಳಿಗೂ ಹಾನಿ

ಹುಬ್ಬಳ್ಳಿ : ಅತಿವೇಗದಿಂದ ಲಾರಿ ಚಲಾಯಿಸಿದ ಪರಿಣಾಮ ಸುಮಾರು 10 ಕಿ.ಮೀ. ರಸ್ತೆಯುದ್ದಕ್ಕೂ ಅವಾಂತರ ಸೃಷ್ಟಿಸಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಛಬ್ಬಿ-ಯಲಿವಾಳ ರಸ್ತೆಯಲ್ಲಿ ತಡರಾತ್ರಿ ವರದಿಯಾಗಿದೆ.
ಘಟನೆಯಿಂದ ರಸ್ತೆ ಬದಿಯಲ್ಲಿದ್ದ ಸುಮಾರು 20 ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ತಂತಿ ಹಾಗೂ ಕೇಬಲ್ ವೈರ್ಗಳು ತುಂಡಾಗಿವೆ. ಅಲ್ಲದೆ, ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಮತ್ತು ಟ್ರ್ಯಾಕ್ಟರ್ಗಳಿಗೂ ಹಾನಿಯಾಗಿದೆ.
ನಾಗಲ್ಯಾಂಡ್ ನೋಂದಣಿಯ ಲಾರಿ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತೆರಳುವ ಉದ್ದೇಶದಿಂದ ಛಬ್ಬಿ-ಯಲಿವಾಳ ಮಾರ್ಗವಾಗಿ ಸಂಚರಿಸುತ್ತಿತ್ತು. ಈ ವೇಳೆ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದೆನ್ನಲಾಗಿದ್ದು, ಮಾರ್ಗಮಧ್ಯೆ ವಿದ್ಯುತ್ ಕಂಬಗಳಿಗೆ ಢಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಂಬಗಳು ಒಂದರ ಹಿಂದೆ ಒಂದರಂತೆ ಮುರಿದು ರಸ್ತೆಗೆ ಉರುಳಿವೆ. ವಿದ್ಯುತ್ ತಂತಿ ಹಾಗೂ ಕೇಬಲ್ ವೈರ್ಗಳೂ ತುಂಡಾಗಿವೆ. ಅಲ್ಲದೆ, ಮಾರ್ಗಮಧ್ಯೆ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಮತ್ತು ಟ್ರ್ಯಾಕ್ಟರ್ಗಳಿಗೂ ಲಾರಿ ಢಿಕ್ಕಿ ಹೊಡೆದು ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.
ಲಾರಿಯ ಅವಾಂತರ ಗಮನಿಸಿದ ಯಲಿವಾಳ ಮತ್ತು ಹೊಸಕಟ್ಟಿ ಗ್ರಾಮದ ಕೆಲವರು ಬೈಕ್ಗಳಲ್ಲಿ ಚಾಲಕನನ್ನು ಬೆನ್ನಟ್ಟಿದ್ದಾರೆ. ಆದರೆ, ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ವಿದ್ಯುತ್ ಕಂಬಗಳು ಹಾಗೂ ತುಂಡಾಗಿ ಬಿದ್ದಿದ್ದ ತಂತಿಗಳಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಗ್ರಾಮಸ್ಥರಿಗೆ ಲಾರಿಯನ್ನು ಹಿಂಬಾಲಿಸಲು ಸಾಧ್ಯವಾಗಿಲ್ಲ. ಇದನ್ನೇ ಬಳಸಿಕೊಂಡ ಚಾಲಕ ಲಾರಿಯೊಂದಿಗೆ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ವಿದ್ಯುತ್ ಕಂಬಗಳು ಧರೆಗುರುಳಿರುವುದರಿಂದ ವಿದ್ಯುತ್ ಪೂರೈಕೆಗೂ ವ್ಯತ್ಯಯ ಉಂಟಾಗುವ ಸಾಧ್ಯತೆ ಎದುರಾಗಿದೆ. ಘಟನೆಯಿಂದ ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದ್ದು, ಲಾರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.






